

ಅಕ್ಕಲಕೋಟ: ನಾಗಣಸೂರ ಗ್ರಾಮದ ಜಗದ್ಗುರು ಶ್ರೀ ಬಸವಲಿಂಗ ಸ್ವಾಮೀಜಿ ಪುಣ್ಯಸ್ಮರಣೋತ್ಸವ ನಿಮಿತ್ತ ಗಡಿನಾಡಿನ ಗಾನ ಕೋಗಿಲೆ ಗಾಯನ ಸ್ಪರ್ಧೆಯ ತೀರ್ಪುಗಾರರಾಗಿ ಕನ್ನಡ ಚಲನಚಿತ್ರ ರಂಗದ ಖ್ಯಾತ ಹಿನ್ನೆಲೆ ಗಾಯಕ ರಾಜೇಶ ಕೃಷ್ಣನ್ ಭಾಗವಹಿಸಲಿದ್ದಾರೆ.
ಈಗಾಗಲೇ ಎರಡು ಸುತ್ತು ಪೂರ್ಣಗೊಂಡಿದ್ದು, ಅಂತಿಮ ಸುತ್ತಿನ ಗ್ರ್ಯಾಂಡ್ ಫಿನಾಲೆ ಗುರುವಾರ ನಡೆಯಲಿದ್ದು, ಅದರಲ್ಲಿ ರಾಜೇಶ ಕೃಷ್ಣನ್ ತೀರ್ಪುಗಾರರಾಗಿ ಇರಲಿದ್ದಾರೆ. ಸ್ಪರ್ಧೆಯಲ್ಲಿ ೫೦೦ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಅಂತಿಮ ಸುತ್ತಿಗೆ ೧೫ ಜನ ಆಯ್ಕೆಯಾಗಿದ್ದಾರೆ. ಅವರ ಗಾನ ಸಿರಿ ಮತ್ತು ಸ್ಪರ್ಧೆಯಲ್ಲಿ ವೀಕ್ಷಿಸಬೇಕು ಎಂದು ನಾಗಣಸೂರು ತುಪ್ಪದ ಮಠದ ಪೀಠಾಧಿಪತಿ ಶ್ರೀ ಡಾ.ಅಭಿನವ ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಖ್ಯಾತ ಗಾಯಕ, ಯುವ ಸಾಹಿತಿ ಕಾಶೀನಾಥ ಮಣ್ಣೂರೆ, ವಿಜಯಪುರದ ಖ್ಯಾತ ಗಾಯಕ ವೀರೇಶ ವಾಲಿ ನೇತೃತ್ವದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.
ನಾಳೆ ಪುಣ್ಯಾರಾಧನೆ: ಶುಕ್ರವಾರ ಶ್ರೀ ಬಸವಲಿಂಗ ಸ್ವಾಮೀಜಿಗಳ ಪುಣ್ಯಾರಾಧನೆ ಆರಂಭವಾಗಲಿದೆ. ೭,೦೦೦ ಜಂಗಮರ ಆರಾಧನೆ, ೧೧ ಸಾವಿರ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ, ಲಕ್ಷಾಂತರ ಭಕ್ತರಿಗೆ ಹೋಳಿಗೆ ತುಪ್ಪದ ಮಹಾಪ್ರಸಾದ ಇರಲಿದೆ. ಶನಿವಾರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಬಸವಲಿಂಗ ಸ್ವಾಮೀಜಿಗಳ ಭಾವಚಿತ್ರದ ಮೆರವಣಿಗೆ ಜರುಗಲಿದೆ.