

ವಿಜಯಪುರ: ಮಹಾಮಾರಿ ತೊಲಗಿಸಲು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ‘ಕರೊನಾ ಸೇನಾನಿ’ಗಳಿಗೆ ಆಹಾರ ಮತ್ತು ವೈದ್ಯಕೀಯ ಕಿಟ್ ನೀಡುವುದರ ಜೊತೆಗೆ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತಿರುವ ನಾಗಠಾಣ ಶಾಸಕ ಡಾ.ದೇವಾನಂದ ಚವಾಣ್ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ.
ಕಳೆದೆರೆಡು ದಿನಗಳಿಂದ ನಾಗಠಾಣ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಶಾಸಕ ದೇವಾನಂದ ಚವಾಣ್ ಆಹಾರ ಸಾಮಗ್ರಿ ಹಾಗೂ ವೈದ್ಯಕೀಯ ಕಿಟ್ ಹಂಚುತ್ತಿದ್ದಾರೆ. ಗ್ರಾಮ ಮಟ್ಟದಲ್ಲಿ ತಮ್ಮ ಪ್ರಾಣ ಲೆಕ್ಕಿಸದೇ ಜನರ ಜೀವ ರಕ್ಷಣೆಗೆ ಮುಂದಾಗಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಗ್ರಾಪಂ ಸಿಬ್ಬಂದಿಗೆ ಕಿಟ್ ಹಂಚಿದ್ದಾರೆ. ಇದರಿಂದ ಕರೊನಾ ಸೇನಾನಿಗಳಿಗೂ ಹೊಸ ಹುಮ್ಮಸ್ಸು ಬಂದಿದ್ದು, ಗ್ರಾಮ ಮಟ್ಟದಲ್ಲ ಸಕ್ರಿಯಗೊಂಡಿದ್ದಾರೆ.
ಮಂಗಳವಾರ ಮದಭಾವಿ, ಹೊನ್ನುಟಗಿ, ಹಡಗಲಿ, ಕುಮಟಗಿ, ಶಿವಣಗಿ ಸೇರಿದಂತೆ ವಿವಿಧ ಗ್ರಾಪಂ ವ್ಯಾಪ್ತಿಯಲ್ಲಿ ಕಿಟ್ ಹಂಚಿದ ಶಾಸಕ ದೇವಾನಂದ, ಕರೊನಾ ನಿಯಂತ್ರಿಸುವಲ್ಲಿ ಸೇನಾನಿಗಳ ಪಾತ್ರ ಹಿರಿದಾಗಿದೆ. ಗ್ರಾಮೀಣ ಜನರು ಅವರಿಗೆ ಸಹಕಾರ ನೀಡಬೇಕು. ಅವರು ನೀಡಿದ ಸಲಹೆ ಸೂಚನೆಗಳನ್ನು ಪಾಲಿಸಬೇಕೆಂದರು.
ಕರೊನಾದಿಂದಾಗಿ ಸಾಕಷ್ಟು ಜನ ತೊಂದರೆಗೆ ಸಿಲುಕಿದ್ದಾರೆ. ಉದ್ಯೋಗ ಕಳೆದುಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಜೀವ ಕಳೆದುಕೊಂಡಿದ್ದಾರೆ. ಈ ಪಿಡುಗು ನಮಗೆಲ್ಲರಿಗೂ ಸವಾಲಾಗಿದೆ. ನಾವಲ್ಲರೂ ಒಟ್ಟಾಗಿ ಈ ಮಹಾಮಾರಿ ಹೊಡೆದೋಡಿಸೋಣ ಎಂದರು.
ಗ್ರಾಮೀಣರ ಆರೋಗ್ಯ ರಕ್ಷಣೆಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಮಹತ್ವದ್ದಾಗಿದೆ. ಗ್ರಾಮ ಮಟ್ಟದ ಕಾರ್ಯಪಡೆ ಮನೆ ಮನೆಗೆ ಹೋಗಿ ಆರೋಗ್ಯ ತಪಾಸಣೆ ನಡೆಸಬೇಕು. ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ಆರೈಕೆ ಕೇಂದ್ರಕ್ಕೆ ಸಾಗಿಸಬೇಕು. ಇದೊಂದು ಕರ್ತವ್ಯ ಎಂದು ಭಾವಿಸುದಕ್ಕಿಂತ ಹೆಚ್ಚಾಗಿ ಮಾನವೀಯ ಕಳಕಳಿಯೊಂದಿಗೆ ಜನರ ಜೀವ ರಕ್ಷಣೆಗೆ ಮುಂದಾಗಬೇಕೆಂದು ಕರೊನಾ ಸೇನಾನಿಗಳಿಗೆ ತಿಳಿಸಿದರು.
ತಾಪಂ ಇಒ ಬಲರಾಮ ರಾಠೋಡ, ಆರೋಗ್ಯ ಅಧಿಕಾರಿ ಕವಿತಾ ದೊಡಮನಿ, ಮದಬಾವಿ ಗ್ರಾಪಂ ಅಧ್ಯಕ್ಷ ಚೇತನ ಬಗಲಿ, ಹೊನ್ನುಟಗಿ ಗ್ರಾಪಂ ಅಧ್ಯಕ್ಷೆ ಮಹಾದೇವಿ ಸಂಕದ, ಹಡಗಲಿ ಗ್ರಾಪಂ ಸುಶಿಲಾಬಾಯಿ ಜಾಧವ, ಕುಮುಟಗಿ ಗ್ರಾಪಂ ಅಧ್ಯಕ್ಷೆ ಸುಂದರಾಬಾಯಿ ಗಚ್ಚಿನಮನಿ, ಬಿ.ಬಿ. ಬಿರಾದಾರ, ಶಿವಣಗಿ ಗ್ರಾಪಂ ಅಧ್ಯಕ್ಷ ರಿಯಾಜಪಟೇಲ ಚಟ್ಟರಕಿ, ಪ್ರಶಾಂತ ಸಜ್ಜನ, ಸಂತೋಷ ಶೆಟ್ಟಿ, ಜಯಶ್ರೀ ದೇವಗಿರಿ, ಬಿ.ಆರ್. ಬಿರಾದಾರ, ರಾಜಶೇಖರ ಬಿರಾದಾರ, ಹಿರಿಯರಾದ ರಾಮನಗೌಡ ಬಗಲಿ, ಧರ್ಮು ರಾಠೋಡ, ಮುತ್ತುಗೌಡ, ಅಶೋಕ ಬಜಂತ್ರಿ, ಕಲ್ಲು ಬಳ್ಳಾರಿ, ರಾಜಕುಮಾರ ಮೂಲಿಮನಿ ಮತ್ತಿತರರಿದ್ದರು.