ನಷ್ಟದಲ್ಲಿರುವ ಕೆಎಸ್​ಆರ್​ಟಿಸಿಗೆ ಮತ್ತೆ ಬರೆ

1MDG1 A
Published on

ಮುಂಡರಗಿ: ಪಟ್ಟಣದಲ್ಲಿ ಕರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ವ ವ್ಯಾಪಾರಸ್ಥರ ಸಮ್ಮುಖದಲ್ಲಿ ತಾಲೂಕಾಡಳಿತ ಕೈಗೊಂಡ ನಿರ್ಣಯದಿಂದ ಪಟ್ಟಣ ಸ್ತಬ್ಧವಾಗಿದೆ. ಇದರಿಂದಾಗಿ ಮೊದಲಿನಿಂದಲೇ ನಷ್ಟದಲ್ಲಿದ್ದ ಕೆಎಸ್​ಆರ್​ಟಿಸಿ ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ.

ಸಾಮಾನ್ಯ ದಿನಗಳಲ್ಲಿ ಪಟ್ಟಣದ ಕೆಎಸ್​ಆರ್​ಟಿಸಿ ಡಿಪೋದಲ್ಲಿ ದಿನಕ್ಕೆ 6ರಿಂದ 7ಲಕ್ಷ ರೂ. ಕಲೆಕ್ಷನ್ ಇತ್ತು. ಲಾಕ್​ಡೌನ್ ಸಮಯದಲ್ಲಿ ಬಸ್ ಸಂಚಾರ ಪ್ರಾರಂಭಿಸಿದಾಗ ದಿನಕ್ಕೆ 2.8 ಲಕ್ಷ ರೂ. ಕಲೆಕ್ಷನ್ ಆಗುತ್ತಿತ್ತು. ಇದೀಗ ಪಟ್ಟಣ ಬೆಳಗ್ಗೆ 11 ಗಂಟೆಗೆ ಬಂದ್ ಆಗುತ್ತಿರುವ ಹಿನ್ನೆಲೆಯಲ್ಲಿ ನಿತ್ಯದ ಕಲೆಕ್ಷನ್ 1.8 ಲಕ್ಷ ರೂ.ಗೆ ಇಳಿದಿದೆ. ಮೊದಲೇ ನಷ್ಟದಲ್ಲಿದ್ದ ಕೆಎಸ್​ಆರ್​ಟಿಸಿಗೆ ಮತ್ತಷ್ಟು ಹೊರೆ ಬಿದ್ದಂತಾಗಿದೆ.

ಪಟ್ಟಣದಲ್ಲಿ ಬೆಳಗ್ಗೆ 6ರಿಂದ 11 ಗಂಟೆವರೆಗೆ ಮಾತ್ರ ಎಲ್ಲ ಅಂಗಡಿ-ಮುಗ್ಗಟ್ಟುಗಳು ತೆರೆದಿರುತ್ತವೆ. ನಂತರ ಎಲ್ಲ ವ್ಯಾಪಾರ-ವಹಿವಾಟುಗಳು ಸ್ಥಗಿತಗೊಳ್ಳುತ್ತಿವೆ. ವ್ಯಾಪಾರ-ವಹಿವಾಟಿಗಾಗಿ ಗ್ರಾಮೀಣ ಭಾಗದವರೂ 11 ಗಂಟೆಯೊಳಗೆ ಬಂದು ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮಧ್ಯಾಹ್ನದ ನಂತರ ಬಸ್ ಹಾಗೂ ಇತರೆ ವಾಹನಗಳ ಸಂಚಾರವಿಲ್ಲದೆ ಪಟ್ಟಣ ಬಣಗುಡುತ್ತಿದೆ.

ಕೆಲವೆಡೆ ಬಸ್​ಗಳು ಪ್ರಯಾಣಿಕರಿಲ್ಲದೆ ಖಾಲಿಯಾಗಿ ಸಂಚರಿಸುತ್ತಿವೆ. ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಣಗುಡುತ್ತಿದೆ. ಮಧ್ಯಾಹ್ನದ ನಂತರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವುದಕ್ಕೆ ಆಗಮಿಸುವ ವಿದ್ಯಾರ್ಥಿಗಳು ಸೇರಿ ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ ಸಂಚರಿಸುತ್ತಿದ್ದಾರೆ.

ಈ ಮೊದಲು ಪಟ್ಟಣದ ಕೆಎಸ್​ಆರ್​ಟಿಸಿ ಡಿಪೋದಿಂದ 60 ಬಸ್​ಗಳು ಸಂಚಾರಿಸುತ್ತಿದ್ದವು. ಆದರೆ, ಮೂರು ದಿನಗಳಿಂದ ಗದಗ, ಕೊಪ್ಪಳ, ಶಿರಹಟ್ಟಿ, ಬೆಂಗಳೂರು ಭಾಗಕ್ಕೆ ಸಂಚರಿಸುತ್ತಿದ್ದ 10 ಬಸ್​ಗಳನ್ನು ಕಡಿಮೆ ಮಾಡಲಾಗಿದೆ. ಸದ್ಯ ವಿವಿಧ ಕಡೆಗಳಿಗೆ 50 ಬಸ್​ಗಳು ಮಾತ್ರ ಸಂಚರಿಸುತ್ತಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ಣಗೊಂಡ ಮೇಲೆ ಪ್ರಯಾಣಿಕರಿಲ್ಲದ ಮಾರ್ಗಗಳ ಬಸ್​ಗಳನ್ನೂ ಕಡಿಮೆ ಮಾಡುವ ಸಾಧ್ಯತೆ ಇದೆ.

ಕರೊನಾ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣವು ಸ್ತಬ್ಧವಾಗಿದೆ. ಇದರಿಂದ ಬಸ್​ನಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಕಡಿಮೆಯಾಗಿದೆ. ಮಧ್ಯಾಹ್ನ ನಂತರ ವ್ಯಾಪಾರ-ವಹಿವಾಟು ಸ್ಥಗಿತವಾಗುತ್ತಿದ್ದಂತೆ ಬಸ್ ಪ್ರಯಾಣಿಕರ ಸಂಖ್ಯೆ ವಿರಳವಾಗಿರುತ್ತದೆ.| ಮಲ್ಲಿಕಾರ್ಜುನಗೌಡ ಹಕ್ಕಂಡಿ ಸ್ಥಳೀಯ

ಲಾಕ್​ಡೌನ್ ತೆರವು ಆದ ಮೇಲೆ ದಿನಕ್ಕೆ 2.8 ಲಕ್ಷ ರೂ. ಕಲೆಕ್ಷನ್ ಇತ್ತು. ಆದರೆ, ಮೂರು ದಿನಗಳಿಂದ ಪಟ್ಟಣ ಸ್ತಬ್ಧವಾದ ಹಿನ್ನೆಲೆಯಲ್ಲಿ ಪ್ರತಿದಿನಕ್ಕೆ 1 ಲಕ್ಷ ರೂ. ಕಡಿಮೆ ಕಲೆಕ್ಷನ್ ಆಗುತ್ತಿದೆ. ಕೆಲವೆಡೆ ಪ್ರಯಾಣಿಕರು ಇಲ್ಲದಿದ್ದರೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಬಸ್​ಗಳನ್ನು ಓಡಿಸಲಾಗುತ್ತಿದೆ.| ವಿಜಯಕುಮಾರ ಕುಮಟಳ್ಳಿ ಕೆಎಸ್​ಆರ್​ಟಿಸಿ ಡಿಪೋ ವ್ಯವಸ್ಥಾಪಕ ಮುಂಡರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net