ನಷ್ಟದಲ್ಲಿದೆ ರಾಜ್ಯ ರಸ್ತೆ ಸಾರಿಗೆ ನಿಗಮ

Published on

ತುಮಕೂರು: ರಾಜ್ಯ ರಸ್ತೆ ಸಾರಿಗೆ ನಿಗಮವು ನಷ್ಟದಲ್ಲಿದ್ದು, ಶಕ್ತಿ ಯೋಜನೆ ಬಳಿಕ ಸ್ವಲ್ಪಮಟ್ಟಿಗೆ ಉಸಿರಾಡುತ್ತಿದೆ ಎಂದು ಕೆಎಸ್​ಆರ್​ಟಿಸಿ ನಿಗಮದ ಅಧ್ಯಕ್ಷ ಎಸ್​.ಆರ್​.ಶ್ರೀನಿವಾಸ್​ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಬೇಡಿಕೆ ಈಡೇರಿಸುವಂತೆ ಆ.5ರಂದು ಸಾರಿಗೆ ನೌಕರರು ಮುಷ್ಕರ ಆರಂಭಿಸಲಿದ್ದು, ಈ ಬಗ್ಗೆ ನಮಗೂ ನೋಟಿಸ್​ ಬಂದಿದೆ. ಸಿಎಂ ಗಮನಕ್ಕೆ ತಂದಿದ್ದು ಅವರೇ ಮುಷ್ಕರನಿರತರ ಬೇಡಿಕೆ ಈಡೇರಿಸಬೇಕಿದೆ ಎಂದರು.ಸಾರಿಗೆ ನೌಕರ ಬೇಡಿಕೆಯನ್ನು ಸರ್ಕಾರವೇ ಈಡೇರಿಸಬೇಕು. ಆದರೆ, ಇದು ನಮ್ಮ ಸರ್ಕಾರದಲ್ಲಿ ಆಗಿರುವಂಥದ್ದಲ್ಲ. ಹಿಂದಿನ ಸರ್ಕಾರ ಮಾಡಿದ ತೀರ್ಮಾನಗಳು ಅವು. ಈ ಹಿಂದೆ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಅಂದು ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಶೇ.15 ಅರಿಯರ್ಸ್​ ಮಾಡಿದ್ದು, 1800 ಕೋಟಿ ರೂ. ಕೊಡಬೇಕು. ಅವತ್ತಿನ ಷರತ್ತಿನ ಪ್ರಕಾರ 2024ಕ್ಕೆ ವೇತನ ಮರು ಪರಿಶೀಲನೆ ಮಾಡಬೇಕಿತ್ತು. ಇಂತಹ ಸುಮಾರು ಬೇಡಿಕೆ ಇಟ್ಟಿದ್ದು, ಸಿಎಂ ಗಮನಕ್ಕೆ ತರಲಾಗಿದೆ. 2 ದಿನದೊಳಗೆ ಸಿಎಂ ಸಭೆ ಕರೆದು ಮಾತನಾಡುತ್ತಾರೆ ಎಂದರು.ಎಸ್ಮಾ ಜಾರಿ ಮಾಡುತ್ತಾರೆಂಬುದು ಸರಿಯಲ್ಲ. ನಾವಿನ್ನು ಏನೂ ಮಾಡೆ ಇಲ್ಲ. ಯಾರಿಗೂ ಬೆದರಿಕೆ ಹಾಕಿಲ್ಲ. ಅವರು ಕೂಡ ನಮ್ಮ ನಿಗಮದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ನಾವು ಎಲ್ಲ ಸವಲತ್ತುಗಳನ್ನು ಕೊಡಲು ಪ್ರಯತ್ನಿಸಿದ್ದೇವೆ. ಇವೆಲ್ಲ ನಿಗಮದ ಮೇಲೆ ಹೆಚ್ಚಿನ ಆರ್ಥಿಕ ಒತ್ತಡ ಬೀಳುವಂತಹುದು. ರಾಮಲಿಂಗಾರೆಡ್ಡಿ 2013ರಲ್ಲಿ ಮಂತ್ರಿಯಾದಾಗ 50&-60 ಕೋಟಿ ರೂ. ಲಾಭದಲ್ಲಿತ್ತು. ಈಗ ನಷ್ಟದಲ್ಲಿದೆ. ಶಕ್ತಿ ಯೋಜನೆಯಡಿ ಸರ್ಕಾರ ನಿಗಮಗಳಿಗೆ ಹಣ ಕೊಡುತ್ತಿದ್ದು, ಸ್ವಲ್ಪ ಉಸಿರಾಡುವಂತಾಗಿದೆ. ಬಿಡಿ ಉಪಕರಣಗಳು, ಡೀಸೆಲ್​ ಬೆಲೆ ಹೆಚ್ಚಳವಾಗಿದ್ದರೂ ಟಿಕೆಟ್​ ದರ ಹೆಚ್ಚಳ ಮಾಡಿಲ್ಲ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net