

ಹೊಳೆನರಸೀಪುರ: ಸರ್ಕಾರದ ನಿರ್ಲಕ್ಷೃ ಧೋರಣೆಯಿಂದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇಲಾಖೆ 48,000 ಕೋಟಿ ರೂ. ನಷ್ಟ ಅನುಭವಿಸುತ್ತಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ದೂರಿದ್ದಾರೆ.
ತಾಲೂಕಿನ ಕಳ್ಳಿ ಕೊಪ್ಪಲು ಗಂಗೂರು ಸಮೀಪ 66/11 ಕೆವಿ ಉಪ ವಿದ್ಯುತ್ ವಿತರಣಾ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ಸರ್ಕಾರ ಮೂಲಸೌಲಭ್ಯಗಳನ್ನು ಒದಗಿಸದೆ ಇಂಧನ ಇಲಾಖೆ ಸೊರಗುವಂತಾಗಿದೆ. ಆದಾಯ ತಂದುಕೊಡುತ್ತಿದ್ದ ಇಲಾಖೆ ಇಂದು ನಷ್ಟದಲ್ಲಿದೆ. ಇದಕ್ಕೆ ನೇರಹೊಣೆ ಇಂದಿನ ಸರ್ಕಾರ ಎಂದು ಆರೋಪಿಸಿದರು.
ನಾನು ಇಂಧನ ಇಲಾಖೆ ಮಂತ್ರಿ ಆಗಿದ್ದ ಅವಧಿಯಲ್ಲಿ 486 ವಿವಿಧ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಇಲಾಖೆಯಲ್ಲಿ ಇತಿಹಾಸ ಸೃಷ್ಟಿ ಮಾಡಿದ್ದೆ. ನನ್ನ ಅವಧಿಯಲ್ಲಿ 500 ಕೋಟಿ ರೂ.ಗಳಷ್ಟು ಠೇವಣಿ ಹಣವನ್ನು ಮುಂಗಡವಾಗಿ ಇರಿಸಲಾಗಿತ್ತು. ಆದರೆ, ಈಗ ಇಂಧನ ಇಲಾಖೆ ನಷ್ಟದಲ್ಲಿದೆ. ಈಗಿನ ಸರ್ಕಾರ ಇಲಾಖೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಇದೇ ರೀತಿ ಮುಂದುವರಿದರೆ ಖಾಸಗೀಕರಣ ಆಗುವ ಸಾಧ್ಯತೆ ಇದೆ ಎಂದು ಅಸಮಾಧಾನವ್ಯಕ್ತಪಡಿಸಿದರು.
ಚುನಾವಣಾ ಪ್ರಚಾರಕ್ಕಾಗಿ ರಾಷ್ಟ್ರೀಯ ಪಕ್ಷಗಳು ವಿವಿಧ ಉಚಿತ ಘೋಷಣೆಗಳನ್ನು ಮಾಡಿದ್ದಾರೆ. ಇಷ್ಟೊಂದು ನಷ್ಟದಲ್ಲಿರುವ ಇಲಾಖೆಯಿಂದ ಉಚಿತ ವಿದ್ಯುತ್ ಹೇಗೆ ನೀಡುತ್ತಾರೆ ಎಂಬುದನ್ನೂ ಅವರೇ ತಿಳಿಸಬೇಕಿದೆ ಎಂದು ವ್ಯಂಗ್ಯವಾಡಿದರು.
ಸರ್ಕಾರ ಹತ್ತಾರು ಬಾರಿ ವಿದ್ಯುತ್ ದರ ಏರಿಸಿದರೂ ಇಷ್ಟು ಪ್ರಮಾಣದಲ್ಲಿ ನಷ್ಟ ತೋರಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ರಾಜ್ಯ ಹಾಗೂ ಜಿಲ್ಲೆ ಮಟ್ಟದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಬೇಕು. ಆ ನಿಟ್ಟಿನಲ್ಲಿ ಸರ್ಕಾರ ಅಧಿಕಾರಿಗಳಿಗೆ ಬಲ ತುಂಬಬೇಕು. ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಕೆಲಸ ಕಾರ್ಯಗಳನ್ನು ತುರ್ತಾಗಿ ನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಅಧೀಕ್ಷಕ ಇಂಜಿನಿಯರ್ ಮಹೇಶ್, ಕಾರ್ಯಪಾಲಕ ಇಂಜಿನಿಯರ್ ಗೋಕುಲ, ಮೋಹನ್‌ಕುಮಾರ್, ಸಿದ್ದೇಶ್, ಸವಿತಾ ಅನಿತಾ, ದೊಡ್ಡ ಬ್ಯಾಗುತವಳ್ಳಿ ಗ್ರಾಪಂ ಅಧ್ಯಕ್ಷ ಕಿರಣ್‌ಕುಮಾರ್, ಪಡುವಲ ಹಿಪ್ಪೆ ಗ್ರಾಪಂ ಅಧ್ಯಕ್ಷೆ ರಾಧಾ ಸಂಕನಹಳ್ಳಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಹೇಮಂತ್ ಇತರರು ಹಾಜರಿದ್ದರು.