

ಬೀದರ್: ಇಲ್ಲಿನ ಜನವಾಡಾ ರಸ್ತೆಯ ವಾಟರ್ ಟ್ಯಾಂಕ್ ಹತ್ತಿರ ಮಂಗಳವಾರ ನಡೆದಿದ್ದ ಔರಾದ್ ತಾಲೂಕಿನ ಚಿಂತಾಕಿಯ ಯಲ್ಸನ್ ಮಾದಪ್ಪ (25) ಹತ್ಯೆ ಪ್ರಕರಣವನ್ನು 24 ಗಂಟೆಯಲ್ಲೇ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮದ್ಯ ಸೇವಿಸಿದ ನಶೆಯಲ್ಲಿ ಜರುಗಿದ ಮಾತಿನ ಚಕಮಕಿಯಲ್ಲಿ ಈ ಕೊಲೆ ನಡೆದಿದೆ. ಚಿಕ್ಕ ಸುಳಿವು ಸಹ ಇಲ್ಲದಿದ್ದರೂ ಖಾಕಿ ಪಡೆಯು ಸಾಕಷ್ಟು ಚಾಕಚಕ್ಯತೆಯಿಂದ ಪ್ರಕರಣ ಬೇಧಿಸಿದೆ. ಹತ್ಯೆಗೈದ ಬೀದರ್ ನ ಲೇಬರ್ ಕಾಲನಿಯ ವಿಲ್ಸನ್ ಚಿಟ್ಟಾಕರ್ (20) ಎಂಬಾತನನ್ನು ಬಂಧಿಸಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಕೊಲೆ ಸಂಬಂಧ ಒಂದೂ ಸುಳಿವು ಸಿಗಲಿಲ್ಲ. ಘಟನಾ ಸ್ಥಳದ ಸುತ್ತಮುತ್ತ ಸಿಸಿ ಟಿವಿಗಳನ್ನು ಪರಿಶೀಲಿಸಿದರೂ ಯಾವ ಮಾಹಿತಿಯು ಲಭ್ಯವಾಗಲಿಲ್ಲ. ರಾತ್ರಿ ಹೊತ್ತು ಕುಡಿದ ಅಮಲಿನಲ್ಲಿ ಘಟನೆ ನಡೆದಿರಬಹುದಾದ ಶಂಕೆ ಮೇಲೆ ಜನವಾಡ ರಸ್ತೆಯ ಬಾರ್, ವೈನ್ ಶಾಪ್ ಗೆ ಭೇಟಿ ನೀಡಿದ ವಿಚಾರಣೆ ನಡೆಸಿದಾಗ ಪ್ರಕರಣದ ಜಾಡು ಬಹಿರಂಗವಾಗಿದೆ.
ಯಲ್ಸನ್ ಸಂಗಾರೆಡ್ಡಿಯಿಂದ ಇಲ್ಲಿಗೆ ಬಂದು ಅಂಬೇಡ್ಕರ್ ವೃತ್ತದ ಹತ್ತಿರದ ಬಾರ್ ನಲ್ಲಿ ಮದ್ಯ ಸೇವನೆಗೆ ತೆರಳಿದ್ದನು. ಈತ ಕುಳಿತ ಟೇಬಲ್ ಮೇಲೆಯೇ ವಿಲ್ಸನ್ ಸಹ ಕುಡಿಯಲು ಕುಳಿತಿದ್ದನು. ಇಬ್ಬರೂ ಮೊದಲಿನಿಂದ ಪರಿಚಿತರಿಲ್ಲ. ಕುಡಿದ ಅಮಲಿನಲ್ಲಿ ಇಬ್ಬರಲ್ಲಿ ಕಿರಿಕಿರಿ ಆಗಿದೆ. ಈ ಜಗಳ ಬಾರ್ ಮ್ಯಾನೇಜರ್ ವರೆಗೆ ಹೋಗಿದ್ದಾಗ, ಅವರು ಇಬ್ಬರಿಗೂ ಹೊರಗೆ ಕಳಿಸಿದ್ದರು. ಇಲ್ಲಿಂದ ಸ್ವಗ್ರಾಮ ಚಿಂತಾಕಿಗೆ ಹೋಗಲು ಯಲ್ಸನ್ ಜನವಾಡ ರಸ್ತೆಯ ವಾಟರ್ ಟ್ಯಾಂಕ್ವರೆಗೆ ಕಾಲ್ನಡಿಗೆಯಲ್ಲಿ ತೆರಳಿದ್ದಾನೆ. ಬಾರ್ ಜಗಳದ ಸಿಟ್ಟಿನಲ್ಲಿದ್ದ ವಿಲ್ಸನ್ ನಂತರ ಅಲ್ಲಿಗೆ ತೆರಳಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಎಸ್ಪಿ ನಾಗೇಶ, ಹೆಚ್ಚುವರಿ ಎಸ್ಪಿ ಡಾ.ಗೋಪಾಲ ಬ್ಯಾಕೋಡ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಸವೇಶ್ವರ ಹೀರಾ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ತಂಡದಲ್ಲಿ ನಗರ ಸಿಪಿಐ ರಾಜಣ್ಣ, ಪಿಎಸ್ಐ ಸಂತೋಷ ಎಲ್.ಟಿ., ಸಿಬ್ಬಂದಿಗಳಾದ ಮೋಹನರಾಜ್, ಪ್ರಕಾಶ, ಈರಣ್ಣ, ರಾಜಪ್ಪ, ನಾಗರೆಡ್ಡಿ, ಕಮಲಾಕರ್, ರಾಜೇಂದ್ರ, ಜಾಜ್೯, ವಿಜಯಕುಮಾರ ಇದ್ದರು. ತಂಡದ ಕಾರ್ಯಾಚರಣೆಯನ್ನು ಎಸ್ಪಿ ನಾಗೇಶ ಶ್ಲಾಘಿಸಿದ್ದಾರೆ.