ನಶಿಸುತ್ತಿರುವ ಗಿಡಮೂಲಿಕೆ ರಕ್ಷಣೆ ಅಗತ್ಯ: ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್

1
Published on

ಮೈಸೂರು: ಪಾರಂಪರಿಕ ಗಿಡಮೂಲಿಕೆಗಳು ನಶಿಸುತ್ತಿದ್ದು, ಅವನ್ನು ರಕ್ಷಣೆ ಮಾಡಬೇಕಾದ ಅಗತ್ಯವಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.

ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಮೈಸೂರು ವಿಶ್ವವಿದ್ಯಾಲಯದ ಸಸ್ಯ ವಿಜ್ಞಾನ ಅಧ್ಯಯನ ವಿಭಾಗದಿಂದ 9ನೇ ರಾಷ್ಟ್ರೀಯ ಆಯುರ್ವೇದ ದಿನದ ಅಂಗವಾಗಿ ಮಂಗಳವಾರ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಔಷಧ ಸಸ್ಯಗಳ ಮೋನೊಗ್ರಾಫ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಪರಂಪರೆಯಲ್ಲಿ ನಾಟಿ ವೈದ್ಯ ಪದ್ಧತಿಗೂ ವಿಶೇಷ ಸ್ಥಾನವಿದೆ. ನಮ್ಮ ಋಷಿ, ಮುನಿಗಳು, ಹಿರಿಯರು ಗಿಡಮೂಲಿಕೆಯಿಂದ ಸಾಕಷ್ಟು ಔಷಧವನ್ನು ಕಂಡುಹಿಡಿದು ಜನರಿಗೆ ನೀಡುತ್ತಿದ್ದರು. ಹೀಗಾಗಿ ಆಯುರ್ವೇದ ಬೆಳೆದು ಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗಿಡಮೂಲಿಕೆಗಳು ನಶಿಸುತ್ತಿವೆ. ಆದ್ದರಿಂದ ಅವನತಿಯ ಅಂಚಿನಲ್ಲಿರುವ ಔಷಧ ಸಸ್ಯಗಳ ರಕ್ಷಣೆ ಹಾಗೂ ದಾಖಲೀಕರಣ ತುರ್ತಾಗಿ ಆಗಬೇಕಿದೆ ಎಂದರು.

ಮಲೆನಾಡಿನಲ್ಲಿ ಒಂದು ಮನೆಯಿದ್ದರೆ ಅದರ ಸುತ್ತ ಯಾವ್ಯಾವ ಗಿಡ ಇರಬೇಕೆಂದು ಹಿರಿಯರು ನಿರ್ಧರಿಸಿ ಬೆಳೆಸುತ್ತಿದ್ದರು. ಇದೀಗ ಔಷಧೀಯ ಗುಣವುಳ್ಳ ಸಸ್ಯಗಳನ್ನು ಯಾರಿಗೂ ಗುರುತಿಸಲೂ ಆಗುತ್ತಿಲ್ಲ. ಅವುಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಪಶ್ಚಿಮ ಘಟ್ಟಗಳಲ್ಲೇ ಈ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜನರಲ್ಲಿ ಆಯುರ್ವೇದ ಪದ್ಧತಿ ಕುರಿತು ಹೆಚ್ಚಿನ ಒಲವು ಬರುತ್ತಿದೆ. ಇದರಿಂದ ದಶಕದ ಹಿಂದೆ ಶೇ.2ರಷ್ಟು ಬಳಕೆಯಾಗುತ್ತಿದ್ದ ಆಯುರ್ವೇದ ಔಷಧ ಪ್ರಮಾಣ ಇದೀಗ ಶೇ. 28ಕ್ಕೇರಿದೆ. ಹೀಗಾಗಿ ಸಂಶೋಧನಾ ವಿದ್ಯಾರ್ಥಿಗಳು ಹೆಚ್ಚು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಮೋನೊಗ್ರಾಫ್ ಮಾಡುವ ಬಗೆಯನ್ನು ಕ್ರಮಬದ್ಧವಾಗಿ ಅರಿಯಬೇಕು. ಉಳಿದ ಔಷಧ ಸಸ್ಯಗಳ ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಬೇಕು ಎಂದು ಕೋರಿದರು.

ಪ್ರಾಚೀನ ಕಾಲದಲ್ಲಿ ನಮ್ಮ ಹಿರಿಯರು ಆರೋಗ್ಯ, ಚಿಕಿತ್ಸೆಗಾಗಿ ಗಿಡಮೂಲಿಕೆಗಳನ್ನು ಅವಲಂಬಿಸಿದ್ದರು. ಈ ಸಸ್ಯೌಷಧ ಕುರಿತ ಜ್ಞಾನವೇ ಆಯುರ್ವೇದವೆಂದು ಕರೆಯಲಾಗುತ್ತದೆ. ನಮ್ಮ ದೇಶದಲ್ಲೂ ಸಸ್ಯಗಳ ದಾಖಲೀಕರಣ ಕ್ರಮಬದ್ಧವಾಗಿಲ್ಲ ಎಂದರು.

ಪ್ರಕೃತಿ ಮೂಲದವರಾದರೂ ಅದರೊಂದಿಗೆ ಇರಲು ಇಷ್ಟಪಡುತ್ತಿಲ್ಲ. ನಗರೀಕರಣದ ಪರಿಣಾಮ ನಗರಗಳಿಗೇ ಹೆಚ್ಚು ಗಮನಕೊಡುತ್ತಿದ್ದೇವೆ. ಪಾಲಕರು-ಸ್ನೇಹಿತರು ಬದುಕಿನಲ್ಲಿ ಎಷ್ಟು ಮುಖ್ಯವೋ ಅಷ್ಟೇ ಗಿಡ ಮರಗಳೂ ಮುಖ್ಯವೆಂದು ಯುವ ಸಮುದಾಯ ಅರಿಯಬೇಕು ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದೊಂದಿಗೆ ಮೈಸೂರು ವಿಶ್ವವಿದ್ಯಾಲಯ ಒಪ್ಪಂದ ಮಾಡಿಕೊಂಡು ಸಂಶೋಧನಾ ಕ್ಷೇತ್ರದಲ್ಲಿ ಮಾಡುವ ಕಾರ್ಯದ ಬಗ್ಗೆ ಈಗಾಗಲೇ ಚರ್ಚೆ ನಡೆದಿದ್ದು, ಪರಿಣಾಮ ಈ ಕಾರ್ಯಾಗಾರ ಆಯೋಜಿಸಲಾಗಿದೆ. 207 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ.ಸತ್ಯನಾರಾಯಣ ಭಟ್ ಮಾತನಾಡಿ, ಒಂದು ಗಿಡಮೂಲಿಕೆಯೂ ವಿವಿಧ ಔಷಧೀಯ ಗುಣ ಹೊಂದಿರುತ್ತದೆ. ಔಷಧ ಸಸ್ಯಗಳ ರಕ್ಷಿಸುವ ಹಾಗೂ ಅವುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಎಲ್ಲೆಡೆ ಆಗಬೇಕು ಎಂದರು.

ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ರಾಮರಾವ್, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ, ಜೆಎಸ್‌ಎಸ್ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪ್ರೊ.ಗುರುಬಸವರಾಜ್, ವಿವಿಧ ವಿಭಾಗದ ಮುಖ್ಯಸ್ಥರಾದ ಪ್ರೊ.ರಾಜ್‌ಕುಮಾರ್ ಎಚ್.ಗಾರಂಪಳ್ಳಿ, ಪ್ರೊ.ಜನಾರ್ದನ್, ಪ್ರೊ. ಅಮೃತೇಶ್ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net