ನಶಾಮುಕ್ತ ದುರ್ಗಕ್ಕೆ ಯುವಜನತೆ ಬೆಂಬಲ

ctd--00001
Published on

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಸದೃಢ ಆರೋಗ್ಯ ಜಾಗೃತಿಯೊಂದಿಗೆ ಮಾದಕ ವಸ್ತು ಮಾರಾಟ, ಸೇವನೆಯಂಥ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಯುವ ಶಕ್ತಿಯ ಬೆಂಬಲ ಪಡೆಯಲು ಜಿಲ್ಲಾ ಪೊಲೀಸ್ ಮುಂದಾಗಿದೆ. ಇಲಾಖೆಯ ಈ ಪ್ರಯತ್ನ ರಾಜ್ಯದಲ್ಲೇ ಮೊದಲನೆಯದಾಗಿದೆ.

‘ಸದೃಢ ಯುವಜನತೆ, ನಶಾಮುಕ್ತ ಚಿತ್ರದುರ್ಗ’ ಘೋಷಣೆಯಡಿ ಜಿಲ್ಲೆಯಲ್ಲಿ ಕನಿಷ್ಠ 500 ಜನರ ಯುವ ಪಡೆಯನ್ನು ಮಾದಕ ವಸ್ತುಗಳ ವಿರುದ್ಧದ ಹೋರಾಟಕ್ಕೆ ಸಜ್ಜುಗೊಳಿಸಲು ಇಲಾಖೆ ಯೋಜನೆ ರೂಪಿಸಿದೆ.

ಟ್ರಾಫಿಕ್ ಹೊರತುಪಡಿಸಿ ಜಿಲ್ಲೆಯ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ 18-25 ವರ್ಷದೊಳಗಿನ ಕನಿಷ್ಠ 20 ಮಂದಿ ಆಯ್ಕೆ ಮಾಡಿಕೊಳ್ಳಲಾಗುವುದು. ನಿರ್ದಿಷ್ಟ ಸಮಯ ನಿಗದಿಯೊಂದಿಗೆ ರನ್ನಿಂಗ್, ಪುಶ್‌ಅಪ್, ಪುಲ್‌ಅಪ್ಸ್, ಬಸ್ಕಿ ಇತ್ಯಾದಿ ವ್ಯಾಯಾಮಗಳ ಮೂಲಕ ಯುವಜನರ ಆಯ್ಕೆ ನಡೆಯಲಿದೆ.

ಯುವಕ-ಯುವತಿಯರ ಆಯ್ಕೆ ಮಾನದಂಡ, ನಿಯಮಗಳು ಪ್ರತ್ಯೇಕವಾಗಿರುತ್ತವೆ. ಹೀಗೆ ಪ್ರತಿ ಠಾಣೆ ವ್ಯಾಪ್ತಿಯಿಂದ ಜಿಲ್ಲೆಯಲ್ಲಿ ಆಯ್ಕೆಯಾಗುವ ಅಂದಾಜು 500 ಯುವಜನರಿಗೆ ಜಿಲ್ಲಾಮಟ್ಟದಲ್ಲಿ ಮತ್ತೆ 5 ಕಿ.ಮೀ. ರನ್ನಿಂಗ್, ಪುಶ್‌ಅಪ್ಸ್, ಪುಲ್‌ಅಪ್ಸ್, ಬಸ್ಕಿ ಇತ್ಯಾದಿಗಳಿರುತ್ತವೆ.

ಇವುಗಳಲ್ಲಿ ಮೇಲುಗೈ ಸಾಧಿಸುವ ಟಾಪ್ 50 ಯುವಕ-ಯುವತಿಯರಿಗೆ ತಲಾ ಕನಿಷ್ಠ 2500 ರೂ. ನಗದು ಹಾಗೂ ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಗುತ್ತದೆ. ಈ ಯುವ ಜನರು ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಯ್ದುಕೊಳ್ಳುವುದು ಹಾಗೂ ಇತರರನ್ನು ಪ್ರೋತ್ಸಾಹಿಸುವುದು ಒಂದೆಡೆಯಾದರೆ, ನಶೆ ವಸ್ತುಗಳ ವಿರುದ್ಧ ನಿಗಾ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾರೆ. ಜತೆಗೆ ನಶಾ ಮುಕ್ತ ಚಿತ್ರದುರ್ಗದ ನಿರ್ಮಾಣಕ್ಕೆ ಕೈ ಜೋಡಿಸಲು ಪ್ರೇರೇಪಿಸಲಾಗುತ್ತದೆ.

ಎಲ್ಲ 500 ಯುವಜನರಿಗೂ ನಶೆಮುಕ್ತ ಕರ್ನಾಟಕ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತದೆ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಇತರರಿಗೂ ಈ ಕುರಿತು ತಿಳಿವಳಿಕೆ ಮೂಡಿಸಿ, ಮಾದಕ ವಸ್ತು ಮಾರಾಟ, ಸೇವನೆಯಂತಹ ಚಟುವಟಿಕೆಗಳು ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಲು ಪಡೆಯನ್ನು ಸಜ್ಜುಗೊಳಿಸಲಾಗುತ್ತದೆ.

ಪ್ರತಿ ತಿಂಗಳು ಸಭೆ

ಠಾಣೆ ಮಟ್ಟದಲ್ಲಿ ಒಂದು ದಿನ ಯುವಜನರ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಆಯ್ಕೆಯಾದ 20 ಯುವಕ/ಯುವತಿಯರು ಪಾಲ್ಗೊಳ್ಳಲಿದ್ದಾರೆ. ಶಾಲಾ ಕಾಲೇಜುಗಳಿಗೆ ಕಾಲಕಾಲಕ್ಕೆ ತೆರಳಿ, ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವಂತೆ ಇವರನ್ನು ಅಧಿಕಾರಿಗಳು ಕೋರಲಿದ್ದಾರೆ.

ಡ್ರೋನ್ ಸರ್ವೆ

ಜಿಲ್ಲೆಯಲ್ಲಿ ಕಳೆದ ಜನವರಿ 1 ರಿಂದ ಆಗಸ್ಟ್ 31 ರವರೆಗೆ ದಾಖಲಾಗಿರುವ ಗಾಂಜಾ ಮಾರಾಟ, ಸೇವನೆಗೆ ಸಂಬಂಧಿಸಿದಂತೆ 131 ಆರೋಪಿತರ ವಿರುದ್ಧ 73 ಪ್ರಕರಣ ದಾಖಲಾಗಿವೆ. 24 ಆರೋಪಿತರನ್ನು ಬಂಧಿಸಲಾಗಿದೆ. 17 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 24 ತನಿ ಖೆಯಲ್ಲಿವೆ ಹಾಗೂ 27 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಈಚೆಗೆ ನಗರದ ಹೊರವಲಯದಲ್ಲಿ ವಶಪಡಿಸಿಕೊಂಡಿದ್ದ 17,459 ಕೆಜಿ ಗಾಂಜಾವನ್ನು ನಾಶಪಡಿಸಲಾಗಿದೆ. ಗಾಂಜಾ ಬೆಳೆಗೆ ಸಂಬಂಧಿಸಿದಂತೆ ಶಂಕಾಸ್ಪದ ಪ್ರದೇಶಗಳಲ್ಲಿ ಡ್ರೋನ್ ಸರ್ವೇ ನಡೆಸಲು ಪೊಲೀಸರು ಮುಂದಾಗಿದ್ದಾರೆ.

---ಕೋಟ್---

ಅಕ್ಟೋಬರ್ 5 ರಂದು ‘ಸದೃಢ ಯುವ ಜನತೆ-ನಶಾಮುಕ್ತ ಚಿತ್ರದುರ್ಗ’ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. 12 ರಂದು ಜಿಲ್ಲೆಯ ಪ್ರತಿ ಠಾಣೆ ಮಟ್ಟದಲ್ಲಿ 20 ಮಂದಿ ಯುವಜನರ ಆಯ್ಕೆ ಪ್ರಕ್ರಿಯೆ. 19 ರಂದು ಜಿಲ್ಲಾ ಮಟ್ಟದಲ್ಲಿ ಟಾಪ್ ಫಿಫ್ಟಿ ಯುವಜನರ ಆಯ್ಕೆ, ನಗದು ಬಹುಮಾನ ವಿತರಣೆ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಮೊದಲಾದ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇಂಥದೊಂದು ಪ್ರಯತ್ನವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ರಂಜಿತ್‌ಕುಮಾರ್ ಬಂಡಾರು, ಎಸ್‌ಪಿ, ಚಿತ್ರದುರ್ಗ

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net