

ಯಾದಗಿರಿ: ಶಹಾಪುರ ತಾಲೂಕಿನ ಹೋತಪೇಟದ ಜವಾಹರ ನವೋದಯ ವಿದ್ಯಾಲಯದ 68 ವಿದ್ಯಾರ್ಥಿಗಳು ಸೇರಿ 7 ಸಿಬ್ಬಂದಿಗೆ ಗುರುವಾರ ಕರೊನಾ ಸೋಂಕು ದೃಢಪಟ್ಟಿದ್ದು, ಪಾಲಕರಲ್ಲಿ ಆತಂಕ ಮನೆ ಮಾಡಿದೆ.
ಶಾಲೆಯಲ್ಲಿ ಒಟ್ಟು 528 ವಿದ್ಯಾರ್ಥಿಗಳಿದ್ದು ಕೋವಿಡ್ ಟೆಸ್ಟ್ ಮಾಡಿಸಲಾಗಿತ್ತು. ಈ ವೇಳೆ 68 ವಿದ್ಯಾರ್ಥಿಗಳಿಗೆ ಮತ್ತು 35 ಸಿಬ್ಬಂದಿ ಪೈಕಿ 7 ಜನರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. ಸುದ್ದಿ ತಿಳಿಯುತ್ತಿದ್ದಂತೆ ಶಾಲೆಗೆ ದೌಡಾಯಿಸಿದ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್. ವೈದ್ಯಾಧಿಕಾರಿಗಳೊಂದಿಗೆ ಕೆಲಕಾಲ ಚರ್ಚೆ ನಡೆಸಿದರು.
ಸೋಂಕಿತ ವಿದ್ಯಾರ್ಥಿಗಳು ಆರೋಗ್ಯದಿಂದಿದ್ದು, ಪಾಲಕರು ಆತಂಕ ಪಡುವ ಅಗತ್ಯವಿಲ್ಲ. ಅವರಿಗೆ ಬೇಕಾದ ಊಟ, ಔಷಧ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಸೋಂಕು ಉಲ್ಬಣಗೊಳ್ಳದಂತೆ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸೋಂಕಿತ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಶಾಲೆಯಲ್ಲಿ ಐಸೋಲೇಷನ್ ಮಾಡಲಾಗಿದೆ. ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಿ ಅವರು ಮಕ್ಕಳನ್ನು ಕರೆದುಕೊಂಡು ಹೋದರೆ ಹೋಮ್ ಐಸೋಲೇಷನಲ್ಲಿದ್ದು ಚಿಕಿತ್ಸೆ ಪಡೆದು ಜಾಗೃತಿ ವಹಿಸಲು ತಿಳಿಸಲಾಗಿದೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗೆ ಒಂದು ವಾರ ರಜೆ ಘೋಷಿಸಲಾಗಿದೆ ಎಂದು ಹೇಳಿದರು.
ಶಹಾಪುರ ತಹಸೀಲ್ದಾರ್ ಮಧುರಾಜ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದುಮತಿ ಪಾಟೀಲ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಸಾಜಿದ್ ಇದ್ದರು.