

ಬೆಳಗಾವಿ: ರಾಜ್ಯದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನವೆಂಬರ್‌ನಲ್ಲಿ ಬೆಳಗಾವಿಗೆ ಆಗಮಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಬ್ಬು ಬೆಳೆಗಾರರು, ಮಳೆಯಾಶ್ರಿತ ಪ್ರದೇಶದ ರೈತರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಹಾಗಾಗಿ, ಅರವಿಂದ ಕೇಜ್ರಿವಾಲ್ ಅವರು ಬೆಳಗಾವಿಗೆ ಆಗಮಿಸಿ ರೈತರ ಸಮಸ್ಯೆ ಆಲಿಸಲಿದ್ದಾರೆ. ರೈತರ ಪರವಾಗಿ ಧ್ವನಿ ಎತ್ತಿ ಸರ್ಕಾರಗಳನ್ನು ಎಚ್ಚರಿಸಲಿದ್ದಾರೆ ಎಂದರು. ಈಗಾಗಲೇ ಪಂಜಾಬ್ ಆಮ್ ಆದ್ಮಿ ಸರ್ಕಾರವು ಕಬ್ಬಿನ ಇಳುವರಿ ಆಧಾರದ ಮೇಲೆ ಟನ್ ಕಬ್ಬಿಗೆ 3,800 ರೂ. ವರೆಗೆ ನ್ಯಾಯಯುತ ದರ ನೀಡುತ್ತಿದೆ. ಆದರೆ, ರಾಜ್ಯದಲ್ಲಿ ರೈತರಿಗೆ ನ್ಯಾಯಯುತವಾದ ಕಬ್ಬಿನ ದರ ಸಿಗುತ್ತಿಲ್ಲ. ಎಫ್‌ಆರ್‌ಪಿ ಹೆಸರಿನಲ್ಲಿ ಸಕ್ಕರೆ ಕಾರ್ಖಾನೆಗಳು ಬೆಳೆಗಾರರಿಗೆ ವಂಚಿಸುವ ಕೆಲಸ ಮಾಡಿಕೊಂಡು ಬರುತ್ತಿವೆ. ಟನ್ ಕಬ್ಬಿಗೆ 3,500 ರಿಂದ 4,000 ರೂ. ವರೆಗೆ ನೀಡುವ ಬದಲಾಗಿ 2,500 ರಿಂದ 2,600 ರೂ. ವರೆಗೆ ನೀಡುತ್ತಿವೆ. ರಾಜ್ಯ ಸರ್ಕಾರವು ಕಾರ್ಖಾನೆಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ, ವಲಯ ಸಂಯೋಜಕ ವಿಜಯ ಶಾಸ್ತ್ರಿಮಠ, ಜಿಲ್ಲಾ ಸಂಯೋಜಕ ಶಂಕರ ಹೆಗಡೆ ಇತರರಿದ್ದರು.