

ಮೈಸೂರು: ನಗರದಲ್ಲಿ ರಸ್ತೆಗಳು ಗುಂಡಿ ಬಿದ್ದು, ಹಲವು ಕಡೆ ಕಾಮಗಾರಿ ಅರ್ಧಕ್ಕೆ ನಿಂತಿವೆ. ಆದ್ದರಿಂದ ದಸರಾ ಸಂದರ್ಭ ಹಾಗೂ ಬಳಿಕ ಆರಂಭಿಸಿ ಬಾಕಿ ಉಳಿದಿರುವ ಕಾಮಗಾರಿಯನ್ನು ಶೀಘ್ರವೇ ಆರಂಭಿಸಿ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಮೇಯರ್ ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿ ಸಂಬಂಧ ನಗರಪಾಲಿಕೆ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಗುತ್ತಿಗೆದಾರರು, ವಲಯ ಆಯುಕ್ತರು, ವಲಯಗಳ ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಸಹಾಯಕ ಇಂಜಿನಿಯರ್‌ಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ನವೆಂಬರ್ 15ರೊಳಗೆ, ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿರುವ ಕಾಮಗಾರಿಗಳನ್ನು ನವೆಂಬರ್ ಅಂತ್ಯದೊಳಗೆ ಮುಗಿಸಬೇಕು ಎಂದು ನಿರ್ದೇಶನ ನೀಡಿದರು.
ನಾಡಹಬ್ಬ ದಸರಾ ಸಮಯದಲ್ಲಿ ನಗರದ ಹೃದಯ ಭಾಗದ ರಸ್ತೆಗಳಿಗೆ ಚಾಲನೆ ಕೊಡಲಾಗಿತ್ತು. ನಂತರದ ದಿನಗಳಲ್ಲಿ ಬಡಾವಣೆಗಳ ರಸ್ತೆಗಳನ್ನು ದುರಸ್ತಿಪಡಿಸಿ ಹೊಸದಾಗಿ ಡಾಂಬರೀಕರಣ ಮಾಡಲು ಕಾಮಗಾರಿ ಶುರು ಮಾಡಲಾಗಿತ್ತು. ಆದರೆ ಮಳೆಯ ಕಾರಣದಿಂದಾಗಿ ಅರ್ಧಕ್ಕೆ ನಿಂತಿರುವುದರಿಂದ ಸಾರ್ವಜನಿಕರಿಂದ ದೂರು ಬರುತ್ತಿದೆ. ಕೂಡಲೇ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಶುರು ಆರಂಭಿಸಬೇಕು ಎಂದು ಹೇಳಿದರು.
ಈಗಾಗಲೇ 250 ಕೋಟಿ ರೂ. ವೆಚ್ಚದ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದು 100 ಕೋಟಿ ರೂ.ನಷ್ಟು ಕಾಮಗಾರಿ ಮುಗಿದಿದೆ. ಉಳಿದ 150 ಕೋಟಿ ರೂ. ಕಾಮಗಾರಿಗಳನ್ನು ಮುಗಿಸಿದರೆ ಸರ್ಕಾರದಿಂದ ಹೆಚ್ಚಿನ ಅನುದಾನ ತರಲು ಸಾಧ್ಯವಾಗಲಿದೆ ಎಂದರು.
ಚಾಮರಾಜ, ಕೃಷ್ಣರಾಜ ಕ್ಷೇತ್ರದಲ್ಲಿ ಶಾಸಕರ ಅನುದಾನದಡಿ ಕಾಮಗಾರಿಗಳು ನಡೆಯುತ್ತಿವೆ. ಶಾಸಕರು ಸಲ್ಲಿಸಿರುವ ಪ್ರಸ್ತಾವನೆಗಳಿಗೆ ಒಪ್ಪಿಗೆ ಸಿಕ್ಕಿರುವುದರಿಂದ ಸಾಧ್ಯವಾದಷ್ಟು ಬೇಗನೆ ಕಾಮಗಾರಿ ಮುಗಿಸಬೇಕು. ರಸ್ತೆ ಕಾಮಗಾರಿಗಳನ್ನು ಮಾಡುವಾಗ ಕಳಪೆಗೆ ಅವಕಾಶ ಕೊಡಬಾರದು. ಒಳಚರಂಡಿ ಪೈಪ್‌ಲೈನ್, ರಸ್ತೆಬದಿಯ ಯುಜಿಡಿ ಮ್ಯಾನ್‌ಹೋಲ್‌ಗಳ ಬಳಿ ಸಮರ್ಪಕವಾಗಿ ಮಾಡಬೇಕು. ಮ್ಯಾನ್‌ಹೋಲ್‌ಗಳು ಇರುವ ಕಡೆ ಅವೈಜ್ಞಾನಿಕವಾಗಿ ಡಾಂಬರೀಕರಣ ಮಾಡಲಾಗುತ್ತಿರುವುದರಿಂದ ಮತ್ತೆ ಕಿತ್ತು ಬರುತ್ತದೆ ಎನ್ನುವ ದೂರುಗಳು ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಬೇಕು ಎಂದು ನಿರ್ದೇಶನ ನೀಡಿದರು.
ತಕ್ಷಣ ಬಿಲ್ ಪಾವತಿಸಲು ಸೂಚನೆ: ಕಾಮಗಾರಿ ಮುಗಿದರೂ ಹಣ ಬಿಡುಗಡೆ ಮಾಡದೆ ತೊಂದರೆಯಾಗಿದೆ. ಬ್ಯಾಂಕ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸಾಲ ತಂದು ಕಾಮಗಾರಿ ಪೂರ್ಣಗೊಳಿಸಿರುವುದರಿಂದ ಸಕಾಲದಲ್ಲಿ ಹಣ ಬಿಡುಗಡೆಯಾಗದಿದ್ದರೆ ಸಮಸ್ಯೆಯಾಗುತ್ತಿದೆ ಎಂದು ಗುತ್ತಿಗೆದಾರರು ಅಳಲು ತೋಡಿಕೊಂಡರು.
ಇದಕ್ಕೆ ಸ್ಪಂದಿಸಿದ ಮೇಯರ್ ಶಿವಕುಮಾರ್, ಕಾಮಗಾರಿ ಮುಗಿದ 48ಗಂಟೆಯೊಳಗೆ ಕಾಮಗಾರಿ ಪರಿಶೀಲನೆ ನಡೆಸಿ ಬಿಲ್ ಪಾಸ್ ಮಾಡಬೇಕು. ಆಯಾ ದಿನದಂದು ಎಷ್ಟೆಷ್ಟು ಬಿಲ್ ಪಾಸ್ ಮಾಡಲಾಗಿದೆ ಎಂಬುದರ ವಿವರಣೆಯನ್ನು ಒದಗಿಸುವಂತೆ ಸಂಬಂಧಿಸಿದ ಇಂಜಿನಿಯರ್‌ಗಳಿಗೆ ಸೂಚಿಸಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಕಾಮಗಾರಿ ಮುಗಿಸಿದ ಕೂಡಲೇ ಥರ್ಡ್ ಪಾರ್ಟಿ ಏಜೆನ್ಸಿಯಿಂದ ರಿಪೋರ್ಟ್ ಪಡೆದು ಬಿಲ್ ಪಾಸ್ ಮಾಡಬೇಕು. ವಿಳಂಬ ಮಾಡಿದರೆ ತಮ್ಮ ಗಮನಕ್ಕೆ ತರಬಹುದು ಎಂದು ಭರವಸೆ ನೀಡಿದರು.
ಉಪ ಮೇಯರ್ ರೂಪಾ, ಅಧೀಕ್ಷಕ ಇಂಜಿನಿಯರ್ ಮಹೇಶ್ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.