ನವೀಕರಿಸಬಹುದಾದ ಇಂಧನ ಶಕ್ತಿ ಬಳಕೆಗೆ ಆದ್ಯತೆ ನೀಡಿ

kpp kepac
ಕೊಪ್ಪದಲ್ಲಿ ವಿದ್ಯುತ್ ಉಪಕರಣ ವ್ಯಾಪಾರಿಗಳ ತರಬೇತಿ ಕಾರ್ಯಕ್ರಮವನ್ನು ಭದ್ರಾ ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್, ಪ್ರೀತಿ ಗುಪ್ತಾ ಉದ್ಘಾಟಿಸಿದರು. ರಾಜೇಂದ್ರ, ಎಚ್.ಎಸ್.ಇನೇಶ್, ಸರಳಾ, ಗೀತಾ ಇತರರಿದ್ದರು.
Published on

ಕೊಪ್ಪ: ಪರಿಸರದ ಮೇಲೆ ದುಷ್ಪರಿಣಾಮ ಬೀರದ, ನವೀಕರಿಸಬಹುದಾದ ಇಂಧನ ಶಕ್ತಿ ಬಳಕೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಭದ್ರಾ ಕಾಡಾ ಅಧ್ಯಕ್ಷ ಕೆ.ಪಿ.ಅಂಶುಮಂತ್ ಹೇಳಿದರು.

ಶುಕ್ರವಾರ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ(ಬಿಇಇ), ಭಾರತ ಸರ್ಕಾರದ ಇಂಧನ ಮಂತ್ರಾಲಯದ ಸ್ಟ್ಯಾಂಡರ್ಡ್ ಮತ್ತು ಲೇಬಲಿಂಗ್ ಯೋಜನೆಯಡಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಆಯೋಜಿಸಿದ್ದ ವಿದ್ಯುತ್ ಉಪಕರಣ ವ್ಯಾಪಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವ್ಯವಸ್ಥೆ ಹಂತ ಹಂತವಾಗಿ ಆಧುನೀಕರಣಗೊಳ್ಳುವ ಹೊತ್ತಿನಲ್ಲಿ 2006ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ನವೀಕರಿಸುವ ಇಂಧನ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ ಆರಂಭಿಸಿದರು. ನವೀಕರಿಸಬಹುದಾದ ಇಂಧನ ಅಭಿವೃದ್ಧಿ (ಕ್ರೆಡೆಲ್) ನಿಗಮದ ಅಧ್ಯಕ್ಷರಾಗಿ ಶಾಸಕ ಟಿ.ಡಿ.ರಾಜೇಗೌಡ ಅವರು ಪ್ರಪಂಚದ ತಂತ್ರಜ್ಞಾನ ಬಳಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದರು.

ಗ್ರಾಹಕ ಮತ್ತು ಅಂಗಡಿ ಮಾಲೀಕ ಉತ್ತಮ ಬಾಂಧವ್ಯ ಹೊಂದಬೇಕು. ಅಂಗಡಿ ಮಾಲೀಕರು ಕೇವಲ ವ್ಯವಹಾರಿಕ ಆಧಾರದಲ್ಲಿ ನೋಡಬಾರದು. ಗ್ರಾಹಕರಿಗೆ ಗುಣಮಟ್ಟದ ಹಾಗೂ ಕಡಿಮೆ ಬೆಲೆಯಲ್ಲಿ ಉತ್ಪನ್ನ ತಲುಪಿಸಬೇಕು. ಈ ಹಿಂದೆ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಇಂಧನ ಇಲಾಖೆಯಲ್ಲಿ ಕ್ರಾಂತಿ ರೀತಿಯಲ್ಲಿ ಸೋಲಾರ್ ಶಕ್ತಿಗೆ ಉತ್ತೇಜನ ನೀಡಿದರು. ಸದ್ಯ ಕೆ.ಜೆ.ಜಾರ್ಜ್ ಕೂಡ ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದಾರೆ. ಸರ್ಕಾರ ಸಾಮಾನ್ಯ ಜನರಿಗೆ ರೂಪಿಸುವ ಉತ್ತಮ ಕಾರ್ಯಕ್ರಮದ ಕುರಿತು ನಕಾರಾತ್ಮಕವಾಗಿ ಮಾತನಾಡಬಾರದು ಎಂದು ಹೇಳಿದರು.

ಕಾರ್ಯಕ್ರಮ ಅನುಷ್ಠಾನ ಏಜೆನ್ಸಿ ಡಿಟುಒ ಸಂಸ್ಥೆಯ ಪ್ರೀತಿ ಗುಪ್ತಾ ಮಾತನಾಡಿ, ನವೀಕರಿಸಬಹುದಾದ ಇಂಧನ ಬಳಕೆ ಆಯ್ಕೆ ಅಲ್ಲ. ಬದಲಿಗೆ ಪ್ರತಿಯೊಬ್ಬರ ಜವಾಬ್ದಾರಿ. ಗ್ರಾಹಕರೊಂದಿಗೆ ಅಂಗಡಿ ಮಾಲೀಕರು ಪ್ರಾಥಮಿಕ ಸಂಪರ್ಕ ಹೊಂದಿರುತ್ತಾರೆ. ಗ್ರಾಹಕರಿಗೆ ವಿದ್ಯುತ್ ಉಳಿತಾಯ ಉಪಕರಣದ ಬಗ್ಗೆ ತಿಳಿದಿರುವುದಿಲ್ಲ. ಅಂಗಡಿ ಮಾಲೀಕರು ಮಾಹಿತಿ ನೀಡಬೇಕು. 5 ಸ್ಟಾರ್ ಉತ್ಪನ್ನಗಳನ್ನು ಬಳಸುವುದು ಹೊರೆ ಎನಿಸಿದರೂ ಹೂಡಿಕೆ ಹಣ ಎರಡು ವರ್ಷಗಳಲ್ಲಿ ವಾಪಸ್ ಬಂದಿರುತ್ತದೆ ಎಂದರು.

ಶಿವಮೊಗ್ಗದ ಜೆಎನ್‌ಎನ್ ಕಾಲೇಜು ಪ್ರೊ. ಸುರೇಶ್ ಅವರು ವಿದ್ಯುತ್ ಉಳಿತಾಯ ಉಪಕರಣಗಳು ಮತ್ತು ಬಳಕೆ ಕುರಿತು ಮಾಹಿತಿ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಕುಕ್ಕುಡಿಗೆ, ಎಪಿಎಂಸಿ ಅಧ್ಯಕ್ಷ ರಾಜೇಂದ್ರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್, ಜಿಪಂ ಮಾಜಿ ಅಧ್ಯಕ್ಷ ಪಿ.ಆರ್.ಸದಾಶಿವ, ಅನ್ನಪೂರ್ಣ ನರೇಶ್, ನುಗ್ಗಿ ಮಂಜುನಾಥ್, ಓಣಿತೋಟ ರತ್ನಾಕರ್, ಸುಂದ್ರೇಶ್, ರಾಜಶಂಕರ್, ಬಿ.ಪಿ.ಚಿಂತನ್, ಬಿ.ಸಿ.ರಾಜೇಂದ್ರ, ಕ್ರೆಡೆಲ್ನ ಸರಳಾ, ಗೀತಾ, ಮೆಸ್ಕಾಂ ಅಧಿಕಾರಿಗಳು, ವಿದ್ಯುತ್ ಉಪಕರಣ ಮಾರಾಟಗಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net