

ಸೋರಲಮಾವು ಶ್ರೀಹರ್ಷ ತುಮಕೂರು
ವಿವಿಧ ಕಾರಣದಿಂದ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 1981ರಿಂದ 2015ರವರೆಗೆ ರೈತರು ಠೇವಣಿಯಿಟ್ಟಿರುವ 1015 ಬಂದೂಕುಗಳನ್ನು ನಾಶಪಡಿಸುವ ಪ್ರಕ್ರಿಯೆಗೆ ಜಿಲ್ಲಾಡಳಿತ ಚಾಲನೆ ನೀಡಿದೆ.
ಜಿಲ್ಲಾ ಪೊಲೀಸ್ ಶಸ್ತ್ರಗಾರದಲ್ಲಿ ಬಹುವರ್ಷಗಳಿಂದ ಇರುವ ಅನುಪಯುಕ್ತ ಬಂದೂಕುಗ ನಾಶಕ್ಕೆ ಅನುಮತಿ ಕೋರಿದ್ದು, 445 ಬಂದೂಕು ನಾಶಪಡಿಸಲಾಗಿದೆ.
ನಾಶಪಡಿಸುವ ಪ್ರಕ್ರಿಯೆಗೆ ಅಗತ್ಯ ದಾಖಲೆಗಳನ್ನು ಒದಗಿಸಲು ವಿಲರಾಗಿರುವ ಸಾಕಷ್ಟು ಅರ್ಹರೂ ಬಂದೂಕು ಕಳೆದುಕೊಳ್ಳುವ ಅಪಾಯ ಎದುರಾಗಿದ್ದು, ಈ ಬಗ್ಗೆ ಖುದ್ದು ಜಿಲ್ಲಾಧಿಕಾರಿ ಸಮಸ್ಯೆ ಆಲಿಸಬೇಕು ಎಂದು ಸಾಕಷ್ಟು ಜನರು ಮನವಿ ಮಾಡಿದ್ದಾರೆ.
ಸರ್ಕಾರ ಸೂಚಿಸಿದಾಗ, ಪರವಾನಗಿದಾರ ಮೃತರಾದಾಗ ಅಥವಾ ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಠಾಣೆಗಳ ವಶಕ್ಕೆ ಬಂದೂಕುಗಳನ್ನು ನೀಡಲಾಗುತ್ತಿದೆ, ಹೀಗೆ ಠಾಣೆಗಳಲ್ಲಿ ಡಿಪಾಸಿಟ್ ಮಾಡಿದ ಬಂದೂಕುಗಳನ್ನು ವಾಪಸ್ ಪಡೆಯದೆ ಅಲ್ಲಿಯೇ ಉಳಿಸಿರುವುದು ದೊಡ್ಡ ಸಮಸ್ಯೆ ತಂದೊಡ್ಡಿದೆ.
ಶಸ್ತ್ರಾಸ್ತ್ರ ಕಾಯ್ದೆ 1959 ಕಲಂ (13)ರ ಅನ್ವಯ ರೈತರ ಬೆಳೆ ರಕ್ಷಣೆ ಹಾಗೂ ಆತ್ಮರಕ್ಷಣೆ ಉದ್ದೇಶದಿಂದ ಬಂದೂಕು ಲೈಸೆನ್ಸ್ ಪಡೆಯಲು ಅವಕಾಶವಿದೆ. ಇತ್ತೀಚೆಗೆ ಬಂದೂಕು ಪರವಾನಗಿ ಪಡೆಯುವುದು ಪ್ರತಿಷ್ಠೆಯ ವಿಷಯವಾಗಿದ್ದು, ಸಾಕಷ್ಟು ಲಾಬಿ ಕೂಡ ಮಾಡಲಾಗುತ್ತಿದೆ.
ಲೈಸೆನ್ಸ್ ಪಡೆದ ನಂತರ ಲಕ್ಷಾಂತರ ರೂ. ಕೊಟ್ಟು ಬಂದೂಕು ಪಡೆದಿರುವ ರೈತರು ಈಗ ತಾಂತ್ರಿಕ ಕಾರಣದಿಂದ ನಾಶಪಡಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ರೈತ ಕುಟುಂಬದ ಮುಂದಿನ ಪೀಳಿಗೆಗೆ ಬಂದೂಕು ವರ್ಗಾಯಿಸಲು ಇರುವ ತಾಂತ್ರಿಕ ಅಡ್ಡಿ ನಿವಾರಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಕೂಡ ಮಾಡಿದ್ದಾರೆ.
ಬಂದೂಕು ಸಂರಕ್ಷಣೆಯೇ ಪೊಲೀಸರಿಗೆ ಸಮಸ್ಯೆ!: ವಿವಿಧ ಕಾರಣಕ್ಕೆ ಪೊಲೀಸರ ವಶಕ್ಕೆ ಬರುವ ಬಂದೂಕುಗಳನ್ನು ಕಾವಲು ಕಾಯುವುದು ಹಾಗೂ ನಿರ್ವಹಿಸುವುದು ಪೊಲೀಸರಿಗೆ ತಲೆನೋವಾಗಿದೆ. ಹಾಗಾಗಿ, ಕೆಎಸ್‌ಆರ್‌ಪಿ ಕಮಾಂಡೆಂಟ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ನಾಶಪಡಿಸಲು ಅನುಮತಿ ಕೋರಿದ್ದಾರೆ. 1015 ಜನರಿಗೆ ನೋಟಿಸ್ ನೀಡಲಾಗಿದ್ದು, ಈ ಪೈಕಿ ಉಪಯೋಗಕ್ಕೆ ಯೋಗ್ಯವಲ್ಲದ 445 ಬಂದೂಕು ನಾಶಪಡಿಸಲಾಗಿದೆ. ಹೊಸ ಬಂದೂಕಿಗೆ ಲಕ್ಷಾಂತರ ರೂ.ವೆಚ್ಚವಾಗುತ್ತಿದ್ದು ನಾಶಪಡಿಸುವ ಮುಂಚೆ ಪರವಾನಗಿದಾರನ ಕುಟುಂಬಕ್ಕೆ ಅದನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು ಎಂಬ ವಾದ ಬಲವಾಗಿದೆ.
ತೋಟದ ಮನೆಯಲ್ಲಿ ವಾಸಿಸುವ ನಾವು ಕಾಡುಪ್ರಾಣಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಹಾಗೂ ಆತ್ಮರಕ್ಷಣೆಗಾಗಿ ಲೈಸೆನ್ಸ್ ಪಡೆದಿದ್ದ ಬಂದೂಕು ನವೀಕರಣಕ್ಕೆ ಕೊಟ್ಟ ದಾಖಲೆಗಳನ್ನು ಸಿಬ್ಬಂದಿಯೇ ಕಳೆದು ಹಾಕಿದರು. ಈಗ ಹಳೆಯ ದಾಖಲೆಗಳಿಲ್ಲದೆ ನವೀಕರಣವಿಲ್ಲ ಎಂದು ನಾಶಪಡಿಸಲು ನೋಟಿಸ್ ನೀಡಿದ್ದಾರೆ. ಜಿಲ್ಲಾಧಿಕಾರಿ ನಮ್ಮ ಮನವಿ ಆಲಿಸಿ ತೀರ್ಮಾನಿಸಬೇಕು. ಜಿ.ಎಸ್.ಶ್ರೀನಿವಾಸ್, ಗುರುವಾಪುರ, ಚಿ.ನಾ.ಹಳ್ಳಿ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ 1015 ಬಂದೂಕು ಪರವಾನಗಿದಾರರಿಗೆ ನೋಟಿಸ್ ನೀಡಲಾಗಿದ್ದು, ಮಾರ್ಗಸೂಚಿಯಂತೆ 445 ಅನುಪಯುಕ್ತ ಬಂದೂಕುಗಳ ನಾಶಕ್ಕೆ ಅನುಮತಿ ನೀಡಲಾಗಿದೆ. ಕೆ.ಚನ್ನಬಸಪ್ಪ, ಅಪರ ಜಿಲ್ಲಾಧಿಕಾರಿ