ನವೀಕರಣ ಸಹಿತ ಜಿಲ್ಲಾಸ್ಪತ್ರೆ ಸುಧಾರಣೆಗೆ ಕ್ರಮ

CTD ---00004
Published on

ಚಿತ್ರದುರ್ಗ: ಕೆಎಂಆರ್‌ಇಸಿ 144 ಕೋಟಿ ರೂ.ಅನುದಾನದಡಿ ಜಿಲ್ಲಾಸ್ಪತ್ರೆಯ 450 ಹಾಸಿಗೆ ಸಾಮರ್ಥ್ಯವನ್ನು 650ಕ್ಕೆ ಹೆಚ್ಚಿಸಲಾಗುವುದು ಎಂದು ಜಿಲ್ಲಾ ಸರ್ಜನ್ ಡಾ.ಎಸ್.ಪಿ. ರವೀಂದ್ರ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 1962ರಲ್ಲಿ 250 ಹಾಸಿಗೆ ಸಾಮರ್ಥ್ಯದೊಂದಿಗೆ ಆರಂಭವಾಗಿದ್ದ ಈ ಆಸ್ಪತ್ರೆ ಹಾಸಿಗೆ ಸಾಮರ್ಥ್ಯ ಪ್ರಸ್ತುತ 450 ಇದ್ದರೂ, 570 ಕ್ಕೂ ಹೆಚ್ಚು ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ಆವರಣದಲ್ಲಿ 200 ಹಾಸಿಗೆ ಆಸ್ಪತ್ರೆ ಹೊಸ ಕಟ್ಟಡ ತಲೆ ಎತ್ತಲಿದೆ ಹಾಗೂ ಈಗಿರುವ ಕಟ್ಟಡವನ್ನು 6 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುವುದು ಎಂದರು.
ಬಳಕೆದಾರರ ಶುಲ್ಕ ಹೊರತುಪಡಿಸಿ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಸೇವೆ ಇದೆ. ಯಾರಾದರೂ ಹಣ ಕೇಳಿದರೆ ನೇರವಾಗಿ ತಮ್ಮನ್ನು ಸಂಪರ್ಕಿಸಬೇಕು. ಆಸ್ಪತ್ರೆ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದರು.
ರಕ್ತ ನಿಧಿ ಕೇಂದ್ರ, ಎಂಆರ್‌ಐ, ಡಯಾಲಿಸಿಸ್, ಹೈಟೆಕ್ ಪ್ರಯೋಗಾಲಯ, ಆಲ್ಟ್ರಾಸೌಂಡ್, ಸಿಟಿಸ್ಕಾೃನ್, ಆಪರೇಷನ್ ಥಿಯೇಟರ್‌ಗಳ ಕಾರ‌್ಯಕ್ಷಮತೆ ಸುಧಾರಿಸಲಾಗಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲೂ ಪ್ರತ್ಯೇಕ ಪ್ರಯೋಗಾಲಯ ಸ್ಥಾಪಿಸಲಾಗಿದೆ. ನವಜಾತ ಶಿಶುಗಳ ನ್ಯೂನ್ಯತೆ ಗುರುತಿಸಲು ಅಲ್ಲಿ District Early Intervention Centre ಸ್ಥಾಪಿಸಲಾಗುವುದು. 50 ಹಾಸಿಗೆಗಳ ಹೊಸ ವಾರ್ಡ್ ಅನ್ನೂ ಶೀಘ್ರ ಉದ್ಘಾಟಿಸಲಾಗುವುದು ಎಂದು ವಿವರಿಸಿದರು.
ಪ್ರಯೋಗಾಲಯಗಳಲ್ಲಿ ಈಗ 24/7 ಸರ್ವಿಸ್ ಇದೆ. ಔಷಧ, ಇನ್‌ಪ್ಲಾಂಟ್‌ಗಳ ಕೊರತೆ ಇಲ್ಲ. ರೋಗಿಗಳು ಆಸ್ಪತ್ರೆಗೆ ಬರುವಾಗ ಆಧಾರ್, ರೇಷನ್ ಕಾರ್ಡ್ ತರಬೇಕು. ಎಬಿಎಆರ್‌ಕೆಯಡಿ 26 ಸಾವಿರ ಚಿಕಿತ್ಸೆ ನೀಡಲಾಗಿದೆ.
ನಿಮಾನ್ಸ್ ಸಹಯೋಗದೊಂದಿಗೆ ನರರೋಗ ತಪಾಸಣೆಗೆ ಪ್ರತ್ಯೇಕ ಕೇಂದ್ರ ಪ್ರಾರಂಭಿಸಲಾಗಿದೆ. ಪ್ರತಿ ಶುಕ್ರವಾರ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಅವರು ಲಭ್ಯವಿರುತ್ತಾರೆ. ಪ್ರತಿ ಸೋಮವಾರ ಮತ್ತು ಶುಕ್ರವಾರ ಕ್ಯಾನ್ಸರ್,ಪ್ರತಿ ಗುರುವಾರ ಹೃದ್ರೋಗ ತಪಾಸಣೆಗೂ ಅವಕಾಶ ಮಾಡಿಕೊಡಲಾಗಿದೆ ಎಂದರು.
ಹತ್ತು ಹಾಸಿಗೆಯ ಕಿಮೋಥೆರಪಿ ಕೇಂದ್ರವೂ ಪ್ರಾರಂಭವಾಗಲಿದೆ. ಹಾವು ಕಡಿತ, ವಿಷ ಸೇವನೆ, ಉಸಿರಾಟ ತೊಂದರೆಯಿಂದ ಬಳಲುವ ಶಿಶುಗಳಿಗೆ ಚಿಕಿತ್ಸೆ, ಅಪಘಾತದಲ್ಲಿ ಗಾಯಾಗಳಾದವರಿಗೆ ಸುಸಜ್ಜಿತ ಚಿಕಿತ್ಸೆಯೊಂದಿಗೆ ಪ್ರಾಣ ರಕ್ಷಣೆ ಕೆಲಸವಾಗುತ್ತಿದೆ. ಪಿಜಿ ಡಾಕ್ಟರ್ ಹಾಗೂ ವೈದ್ಯರ ನಡುವಿನ ವಿವಾದ ಬಗೆಹರಿದಿದೆ ಎಂದು ಹೇಳಿದರು.
ವೈದ್ಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಯಲ್ಲಿ ಲಭ್ಯವಿರುವಂತೆ ಕ್ರಮವಹಿಸಲಾಗಿದೆ. ಶುಶ್ರೂಶಕರ ಸಂಖ್ಯೆ ಹೆಚ್ಚಳಕ್ಕೂ ಮನವಿ ಮಾಡಲಾಗಿದೆ. ಸರ್ಕಾರಿ ಮೆಡಿಕಲ್ ಕಾಲೇಜಿನಿಂದಲೂ ಹೆಚ್ಚುವರಿ ವೈದ್ಯರ ಸೇವೆ ಲಭ್ಯವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net