ನವಲೂರು ಪಠಾಣ ಗಲ್ಲಿ ಸೀಲ್​ಡೌನ್

carona logo
Published on

ಧಾರವಾಡ: ನವಲೂರು ಪಠಾಣ ಗಲ್ಲಿಯ ಸೋಂಕಿತನ ಮನೆಯಿಂದ 100 ಮೀ. ಸುತ್ತಳತೆವರೆಗಿನದನ್ನು ನಿಯಂತ್ರಿತ ವಲಯ ಎಂದು ಘೊಷಿಸಿ, ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ನಿಯಂತ್ರಿತ ವಲಯದ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಘೊಷಿಸಲಾಗಿದೆ. ಕರೊನಾ ಸೋಂಕು ಹರಡುವುದನ್ನು ತಡೆಯಲು ಬಫರ್ ಜೋನ್​ನಲ್ಲಿ ಸದಾ ಕಣ್ಗಾವಲು ಮತ್ತು ಪರಸ್ಪರರ ಮಧ್ಯೆ ಅಂತರ ನಿರ್ವಹಣೆ ಕ್ರಮಗಳು ಜಾರಿಯಲ್ಲಿರಬೇಕು. ಸೋಂಕಿತನ ಮನೆಯ 1 ಕಿ.ಮೀ. ವ್ಯಾಪ್ತಿಯಲ್ಲಿ ತೀವ್ರ ಬಫರ್ ಜೋನ್ ಆದೇಶ ಜಾರಿಯಲ್ಲಿರುತ್ತದೆ.

ಇಲಾಖೆಗಳ ಪಾತ್ರ: ನಿಯಂತ್ರಿತ ವಲಯದಲ್ಲಿ ಎಲ್ಲ ಪ್ರವೇಶ ದ್ವಾರಗಳಲ್ಲಿ ತಡೆಗೋಡೆ ಹಾಕಿ ಪೊಲೀಸರು ನಾಕಾಬಂದಿ ಮಾಡಬೇಕು. ಜನರು ಮನೆಯಿಂದ ಹೊರಗೆ ಬರಲು ಬಿಡಬಾರದು. ಅಗತ್ಯ ಸೇವೆ ಮತ್ತು ವೈದ್ಯಕೀಯ ತುರ್ತು ಸಂದರ್ಭಗಳಿಗೆ ಮಾತ್ರ ಪೊಲೀಸರು ತುರ್ತು ಪಾಸ್ ನೀಡಬೇಕು. ಲಾಕ್​ಡೌನ್ ಪಾಲನೆಗೆ ಡ್ರೋನ್ ಸೇರಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕು.

ಅಲ್ಲಿಯ ಜನರಿಗೆ ದಿನಸಿ ಪದಾರ್ಥ, ಹಾಲು, ತರಕಾರಿ, ಮಾಂಸ, ಅಡುಗೆ ಅನಿಲ, ಔಷಧ ಒದಗಿಸುವವರಿಗೆ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆ ಮೂಲಕ ತುರ್ತು ಪಾಸ್ ನೀಡಬೇಕು.

ಆರೋಗ್ಯ ಇಲಾಖೆಯವರು ಸೀಲ್​ಡೌನ್ ಪ್ರದೇಶಕ್ಕಗಿ ಔಟ್​ಪೋಸ್ಟ್ ಆರಂಭಿಸಿ, ಅಗತ್ಯ ಸೇವೆ ಒದಗಿಸಬೇಕು. ದಿನಕ್ಕೆರಡು ಸಲ ಜನಸಂಪರ್ಕಗಳ ಪತ್ತೆ ಕಾರ್ಯಕ್ಕೆ ಅಗತ್ಯ ಸಂಖ್ಯೆಯ ಕ್ಷೇತ್ರ ಸಿಬ್ಬಂದಿ ನಿಯೋಜಿಸಬೇಕು. ಸೋಂಕಿತನ ಜತೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕೂಡಲೆ ಸಾಂಸ್ಥಿಕ ದಿಗ್ಬಂಧನ ಹಾಗೂ ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಗೃಹ ದಿಗ್ಬಂಧನಕ್ಕೆ ಒಳಪಡಿಸಬೇಕು. ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು.

ಹು-ಧಾ ಮಹಾನಗರ ಪಾಲಿಕೆಯವರು ನಿಯಂತ್ರಿತ ವಲಯದಲ್ಲಿ ನೈರ್ಮಲೀಕರಣಕ್ಕೆ ಆದ್ಯತೆ ನೀಡಬೇಕು. ಆಹಾರ ಪೊಟ್ಟಣ ಮತ್ತು ಪಡಿತರ ಒದಗಣೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು.

ನಿಯಂತ್ರಿತ ವಲಯದ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿಗಳು, ಸಂಘಟನೆಯವರು ಜನರಿಗೆ ಆಹಾರ, ಇತರ ಸಾಮಗ್ರಿ ವಿತರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net