ನವಲೂರ ಬಳಿಯ ಮೇಲ್ಸೇತುವೆಯಲ್ಲಿ ಬಿರುಕು

14 Dwd 4
Published on

ಧಾರವಾಡ: ಅವಳಿನಗರದಲ್ಲಿ ಬಿಆರ್​ಟಿಎಸ್ ಯೋಜನೆ ಜಾರಿಯಾಗಿ ಚಿಗರಿ ಬಸ್​ಗಳು ಸಂಚರಿಸುತ್ತಿವೆ. ಆದರೆ ಹುಬ್ಬಳ್ಳಿ- ಧಾರವಾಡ ನಡುವಿನ ನವಲೂರ ಬಳಿ ನಿರ್ವಿುಸಲಾಗುತ್ತಿರುವ ಫ್ಲೈಓವರ್ ಕಾಮಗಾರಿ ಸ್ಥಗಿತಗೊಂಡು ಬರೋಬ್ಬರಿ 16 ತಿಂಗಳು ಕಳೆದಿವೆ. ಈ ಮಧ್ಯೆ ನಿರ್ಮಾಣ ಹಂತದ ಮೇಲ್ಸೇತುವೆಯ ಕಾಲಂನಲ್ಲಿ ಬಿರುಕು ಕಾಣಿಸಿದೆಯೇ ಎಂಬ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.

ಬಿಆರ್​ಟಿಎಸ್ ಬಸ್​ಗಳ ಸಂಚಾರಕ್ಕೆ ನವಲೂರ ಬಳಿ ಒಂದು ಬದಿ ಮೇಲ್ಸೇತುವೆ ನಿರ್ವಣವಾಗಿದೆ. ಖಾಸಗಿ ವಾಹನಗಳೂ ಅದರಲ್ಲಿ ಸಂಚರಿಸುತ್ತಿವೆ. ಮತ್ತೊಂದು ಬದಿಯಲ್ಲಿ ಮೇಲ್ಸೇತುವೆ ನಿರ್ವಣವಾಗುತ್ತಿದ್ದು, ಹಲವು ಕಾರಣಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಅರೆಬರೆ ಕಾಮಗಾರಿ ನಡೆದಿದ್ದು, ಬಳಕೆ ಇಲ್ಲದ ಮೇಲ್ಸೇತುವೆಯ ಅಡಿಯ ಪಿಲ್ಲರ್​ನಲ್ಲಿ ಬಿರುಕು ಕಾಣಿಸಿಕೊಂಡಿದೆ. ಅದರ ಬುಡದಲ್ಲಿ ಅಳವಡಿಸಿರುವ ಪ್ಯಾನಲ್​ಗಳೂ ಉದುರಿ ಬಿದ್ದಿವೆ. ಕಾಮಗಾರಿ ಆರಂಭಿಕ ಹಂತದಲ್ಲೇ ಕಳಪೆಯಾಯಾಗಿದೆ ಎಂಬುದು ಸಾರ್ವಜನಿಕರ ಆರೋಪ. ನೂತನ ನೀಲನಕ್ಷೆ?: ಬಸ್ ನಿಲ್ದಾಣ ಸ್ಥಾಪನೆಗೆ ಆಗ್ರಹಿಸಿ ನವಲೂರ ಗ್ರಾಮಸ್ಥರು ಹಲವು ಬಾರಿ ಹೋರಾಟ ಮಾಡಿದ್ದಾರೆ. ನವಲೂರ ಬಳಿ ವಾಹನಗಳ ಸಂಚಾರಕ್ಕೂ ಅನನುಕೂಲವಾಗುತ್ತಿದ್ದು, ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದೆ ಎಂದು ಸಾರ್ವಜನಿಕರು ದೂರಿದ್ದರು. ಇದರಿಂದ ಎಚ್ಚೆತ್ತುಕೊಂಡ ಬಿಆರ್​ಟಿಎಸ್, ಫ್ಲೈಓವರ್​ನ ನೀಲಿನಕ್ಷೆಯನ್ನು ಪರಿಷ್ಕರಿಸಲು ಯೋಜಿಸಿತ್ತು. ಆದರೆ ಅದಿನ್ನೂ ಕಾರ್ಯಗತವಾಗಿಲ್ಲ.

ಪಟ್ಟು ಬಿಡದ ಗ್ರಾಮಸ್ಥರು: ಬಿಆರ್​ಟಿಎಸ್ ಯೋಜನೆ ಆರಂಭವಾದಾಗಿನಿಂದ ಎಡವಟ್ಟುಗಳ ಸರಮಾಲೆ ಬೆನ್ನು ಬಿದ್ದಿದೆ. ಇದಕ್ಕೆ ನಿದರ್ಶನ ನವಲೂರ ಫ್ಲೈಓವರ್ ಕಾಮಗಾರಿ. ನವಲೂರ ಬಳಿಯ ಸೇತುವೆ ದಿಬ್ಬದ ಮೇಲೆ ಮೊದಲು ಸಾರಿಗೆ ಸಂಸ್ಥೆಯ ಬಸ್​ಗಳ ನಿಲ್ದಾಣವಿತ್ತು. ಆದರೆ ಬಿಆರ್​ಟಿಎಸ್ ಯೋಜನೆ ಬಂದ ಮೇಲೆ ನಿಲ್ದಾಣವನ್ನು ತೆಗೆದು ಹಾಕಲಾಗಿದೆ. ಇತ್ತ ಲಕಮನಹಳ್ಳಿ, ಅತ್ತ ಎಸ್​ಡಿಎಂ ಡೆಂಟಲ್ ಕಾಲೇಜ್​ಗೆ ಬಿಆರ್​ಟಿಎಸ್ ನಿಲ್ದಾಣ ಇವೆ. ನವಲೂರ ಗ್ರಾಮ ಹಾಗೂ ನವಲೂರ ಛಾವಣಿಗೆ ನಿಲ್ದಾಣವಿಲ್ಲ. ಇದರಿಂದ ಅನನುಕೂಲವಾಗುತ್ತಿದೆ ಎಂಬುದು ನವಲೂರ ಗ್ರಾಮಸ್ಥರ ದೂರು. ಅಲ್ಲದೆ ವಿಠ್ಠಲ ಮಂದಿರ ಎದುರು ಎತ್ತರದ ಫ್ಲೈಓವರ್ ನಿರ್ವಣದಿಂದ ನವಲೂರ ಹಾಗೂ ನವಲೂರ ಛಾವಣಿಯನ್ನು ಇಬ್ಭಾಗ ಮಾಡಿದಂತಾಗುತ್ತದೆ. ಮೊದಲಿದ್ದ ಎತ್ತರದಷ್ಟೇ ಫ್ಲೈಓವರ್ ನಿರ್ವಿುಸಬೇಕು ಎಂಬುದು ಗ್ರಾಮಸ್ಥರ ಆಗ್ರಹ. ಇದರಿಂದಾಗಿ ಕಾಮಗಾರಿ ನಿಂತು ಹೋಗಿದೆ.

ಸ್ಥಗಿತಗೊಂಡ ಮೇಲ್ಸೇತುವೆ ಕಾಮಗಾರಿ ಪಿಲ್ಲರ್​ನಲ್ಲಿ ಬಿರುಕು ಕಾಣಿಸಿಕೊಂಡಿಲ್ಲ. ಮೇಲ್ಭಾಗದ ಕೋಟಿಂಗ್ ಕಿತ್ತು ಹೋಗಿದ್ದು, ಕಾಮಗಾರಿ ನಿಂತಿದ್ದರಿಂದ ಪ್ಯಾನಲ್ ಬಿದ್ದಿದೆ. ಅದು ದುರಸ್ತಿ ಮಾಡಬಹುದಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ. ಬಿಆರ್​ಟಿಎಸ್​ನಿಂದ ಹೊಸ ವಿನ್ಯಾಸ ಹಾಗೂ ಯೋಜನೆಯ ನಿರೀಕ್ಷೆಯಲ್ಲಿದ್ದೇವೆ. ಹೊಸ ಪ್ರಸ್ತಾವನೆ ಸಿಕ್ಕ ನಂತರ ಕಾಮಗಾರಿ ಆರಂಭವಾಗುವುದು. | ಎನ್.ಕೆ. ಕುರಂದಕರ ಇಇ, ಕೆಆರ್​ಡಿಸಿಎಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net