ನವಲಗುಂದದಲ್ಲಿ 11 ಕರೊನಾ ಶಂಕಿತರ ಪತ್ತೆ

1 NLG 3
Published on

ನವಲಗುಂದ: ದೆಹಲಿ ನಿಜಾಮುದ್ದೀನ್ ದರ್ಗಾ ಪಕ್ಕದ ತಬ್ಲಿಘಿ ಜಮಾತ್​ನ ಧಾರ್ವಿುಕ ಸಭೆಯಲ್ಲಿ ಪಾಲ್ಗೊಂಡ ತಾಲೂಕಿನ 11 ಕರೊನಾ ಶಂಕಿತರು ಪತ್ತೆಯಾಗಿದ್ದು, ತಾಲೂಕಿನ ಜನತೆ ತಲ್ಲಣಗೊಳ್ಳುವಂತೆ ಮಾಡಿದೆ. ಅವರನ್ನು ತಹಸೀಲ್ದಾರ್

ನವೀನ ಹುಲ್ಲೂರ, ಸಿಪಿಐ ವಿ.ಬಿ. ಮಠಪತಿ, ಪಿಎಸ್​ಐ ಜಯಪಾಲ ಪಾಟೀಲ ಆಂಬುಲೆನ್ಸ್ ಮೂಲಕ ಬುಧವಾರ ಹುಬ್ಬಳ್ಳಿ ಕಿಮ್ಸ್​ಗೆ ಕಳುಹಿಸಿದ್ದಾರೆ.

ಪತ್ತೆಯಾದ ಕರೊನಾ ಶಂಕಿತರು ಪಟ್ಟಣದ ಕಳ್ಳಿಮಠ ಓಣಿ, ಬಸವೇಶ್ವರನಗರ, ಹುಗ್ಗಿ ಓಣಿ, ಕುಂಬಾರ ಓಣಿ, ಹಾಲಕುಸುಗಲ್, ಶಿರೂರ ಸೇರಿ ಎಲ್ಲರೂ ನವಲಗುಂದ ತಾಲೂಕಿನವರು ಎಂದು ಗುರುತಿಸಲಾಗಿದೆ. ಒಟ್ಟು 15 ಶಂಕಿತರೆಂದು ಪರಿಗಣಿಸಲಾಗಿದೆ. ಉಳಿದವರಿಗಾಗಿ ತಹಸೀಲ್ದಾರ್, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಶಂಕಿತರು ದೆಹಲಿಯ ಧಾರ್ವಿುಕ ಸಭೆಯಲ್ಲಿ ಪಾಲ್ಗೊಂಡು ಮಾ. 13ರಂದು ನವಲಗುಂದಕ್ಕೆ ಆಗಮಿಸಿದ್ದರು. ಇವರೆಲ್ಲ ತರಕಾರಿ ವ್ಯಾಪಾರ, ಗಾರೆ, ಕೂಲಿ ಕೆಲಸ ಮಾಡುತ್ತಿದ್ದು, ಕೆಲವರು ಬಡ ಕುಟುಂಬಸ್ಥರಾಗಿದ್ದಾರೆ. ದೆಹಲಿಯಿಂದ ಹಿಂದಿರುಗಿದ ಬಳಿಕವೂ ತಾವು ಕರೊನಾ ಶಂಕಿತರೆಂಬ ಅರಿವಿಲ್ಲದೇ ಸಾರ್ವಜನಿಕರ ಜೊತೆ ಬೆರೆತಿದ್ದಾರೆ. ಇದರಿಂದ ಕರೊನಾ ಸೋಂಕು ಹರಡುವ ಭೀತಿ ತಾಲೂಕಿನ ಜನರಲ್ಲಿದೆ. ಶಂಕಿತರಲ್ಲಿ ಕರೊನಾ ಸೋಂಕು ಕಂಡು ಬಂದರೆ, ತಾಲೂಕಿನಲ್ಲಿ ಮತ್ತಷ್ಟು ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕಾಡಳಿತ ಸಕಲ ಸಿದ್ಧತೆ ಮಾಡಿಕೊಂಡು ಶಂಕಿತರು ಎಲ್ಲೆಲ್ಲಿ ಓಡಾಡಿದ್ದಾರೆ. ಯಾರೊಂದಿಗೆ ಬೆರೆತಿದ್ದಾರೆ ಎಂಬಿತ್ಯಾದಿ ಮಾಹಿತಿ ಯನ್ನು ಸಾರ್ವಜನಿಕರಿಂದ ಕಲೆ ಹಾಕುತ್ತಿದ್ದಾರೆ. ಶಂಕಿತರ ರಕ್ತ ತಪಾಸಣೆ ಮಾದರಿಯನ್ನು ಹುಬ್ಬಳ್ಳಿ ಕಿಮ್ಸ್​ನಿಂದ ತುಮಕೂರ ಲ್ಯಾಬ್​ಗೆ ರವಾನಿಸಲಾಗುವುದು. ವರದಿ ಬಂದ ನಂತರ ನಿಜಾಂಶ ತಿಳಿಯಲಿದೆ. ಅಲ್ಲಿಯವರೆಗೆ ನವಲಗುಂದ ತಾಲೂಕಿನ ಜನರಲ್ಲಿ ಭೀತಿ ಇದೆ.

ಕುಂದಗೋಳದಲ್ಲಿ 16 ಜನರ ಪತ್ತೆ: ದೆಹಲಿ ಮತ್ತಿತರ ಕಡೆ ಪ್ರವಾಸಕ್ಕೆ ತೆರಳಿದ ತಾಲೂಕಿನ 16 ಜನರನ್ನು ಕುಂದಗೋಳ ತಾಲೂಕಾಡಳಿತ ಬುಧವಾರ ಗುರುತಿಸಿದೆ. ದೆಹಲಿಯ ನಿಜಾಮುದ್ದೀನ್ ದರ್ಗಾ ಪಕ್ಕದ ತಬ್ಲಿಘಿ ಜಮಾತ್​ನ ಧಾರ್ವಿುಕ ಸಭೆಯೇ ಕರೊನಾ ವೈರಸ್ ಹರಡುವಿಕೆಯ ಕೇಂದ್ರಬಿಂದುವಾದ ಹಿನ್ನೆಲೆಯಲ್ಲಿ ಈ ವೇಳೆ ದೆಹಲಿಗೆ ತೆರಳಿದವರನ್ನು ಗುರುತಿಸಿದಾಗ ತಾಲೂಕಿನಲ್ಲಿ 16 ಜನರು ಕಂಡುಬಂದಿದ್ದಾರೆ. ಇವರನ್ನು ತಹಸೀಲ್ದಾರ್ ಬಸವರಾಜ ಮೆಳವಂಕಿ, ಸಿಪಿಐ ಬಸವರಾಜ ಕಲ್ಲಮ್ಮನವರ ಬುಧವಾರ ಭೇಟಿ ಮಾಡಿ ಪರಿಶೀಲಿದ್ದಾರೆ. ಆಗ ಅವರು ದೆಹಲಿ ಮತ್ತಿತರ ಪ್ರದೇಶದಲ್ಲಿ ಪ್ರವಾಸ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಅದಕ್ಕೆ ಅಧಿಕಾರಿಗಳು, ನೀವು ಮನೆಯಲ್ಲೇ ಇರಬೇಕು. ವೈದ್ಯಕೀಯ ತಪಾಸಣೆ ಮಾಡಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ದೆಹಲಿ ಧಾರ್ವಿುಕ ಸಭೆಯಲ್ಲಿ ಭಾಗವಹಿಸಿದವರ ಯಾದಿಯನ್ನು ಸರ್ಕಾರವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹು-ಧಾ ಪೊಲೀಸ್ ಆಯುಕ್ತರಿಗೆ ಕಳುಹಿಸಿದೆ. ಅವರನ್ನೆಲ್ಲ ನಾವೀಗ ಪತ್ತೆ ಮಾಡುತ್ತಿದ್ದೇವೆ. ಪತ್ತೆಯಾದವರ ಸ್ಕ್ರೀನಿಂಗ್ ಮಾಡಿದ್ದೇವೆ. ಕರೊನಾ ಲಕ್ಷಣ ಕಂಡುಬಂದವರನ್ನು ಆಸ್ಪತ್ರೆಗೆ ಸೇರಿಸುತ್ತಿದ್ದೇವೆ. ಯಾರು 14 ದಿನ ಕಳೆದಿದ್ದಾರೆ ಅವರಿಗೆ ಮನೆಯಲ್ಲೇ ಇರಲು ಹೇಳಿದ್ದೇವೆ. | ದೀಪಾ ಚೋಳನ್ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net