

ನವಲಗುಂದ: ಮೊರಬ ಗ್ರಾಮದಲ್ಲಿ ಕರೊನಾ ಪ್ರಕರಣ ದೃಢಪಡುವ ಮೂಲಕ ತಾಲೂಕಿಗೂ ಮಹಾಮಾರಿ ವೈರಸ್ ಲಗ್ಗೆ ಇಟ್ಟಿದ್ದು, ನಿಶ್ಚಿಂತೆಯಿಂದ ಇದ್ದ ಜನತೆಯಲ್ಲಿ ಭಯ ಹುಟ್ಟಿಸಿದೆ. ಮೊರಬ ಗ್ರಾಮದ 58 ವರ್ಷದ ವ್ಯಕ್ತಿಗೆ ಕರೊನಾ ವೈರಸ್ ತಗುಲಿದೆ. ಈ ವ್ಯಕ್ತಿಯ ಮಗಳು ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದಳು. ಮಗಳನ್ನು ಕರೆದುಕೊಂಡು ಬರಲು ಮೊರಬದಿಂದ ಕಾರ್ನಲ್ಲಿ ತೆರಳಿದ್ದ. ಬೆಂಗಳೂರಿನಿಂದ ಮೊರಬಕ್ಕೆ ಬಂದ ಬಳಿಕ ವ್ಯಕ್ತಿಗೆ ಕೆಮ್ಮು, ನೆಗಡಿ ಕಾಣಿಸಿಕೊಂಡಿದೆ. ಇದರಿಂದ ಸಂಶಯಗೊಂಡು ಜೂ. 8ರಂದು ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ತಪಾಸಣೆಗಾಗಿ ತೆರಳಿದ್ದ. ಆಗ ಕರೊನಾ ವೈರಸ್ ಇರುವುದು ಪತ್ತೆಯಾಗಿದ್ದು, ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ.
ದೆಹಲಿಯಿಂದ ಬೆಂಗಳೂರಿನ ಮೂಲಕ ಗ್ರಾಮಕ್ಕೆ ಬಂದಿರುವ ಆತನ ಮಗಳ ಗಂಟಲ ದ್ರವ ಮಾದರಿ ಸಂಗ್ರಹಿಸಿ, ಪರೀಕ್ಷಿಸಲಾಗಿತ್ತು. ವರದಿ ನೆಗೆಟಿವ್ ಬಂದಿದೆ. ಕುಟುಂಬದ ಐವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಐವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ವೈದ್ಯಾಧಿಕಾರಿ ಹೊನಕೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕರೊನಾ ಪಾಸಿಟಿವ್ ವ್ಯಕ್ತಿ ಮನೆಯ ಇರುವ ಜಾಡರಪೇಟೆ ಓಣಿಯ 100 ಮೀಟರ್ ಪ್ರದೇಶವನ್ನು ತಾಲೂಕು ಅಧಿಕಾರಿಗಳು ಹಾಗೂ ಪೊಲೀಸರು ಸೀಲ್ಡೌನ್ ಮಾಡಿದ್ದಾರೆ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಲಾಗುತ್ತಿದ್ದು, ಸುಮಾರು 30ರಿಂದ 40 ಜನರ ತಪಾಸಣೆ ನಡೆಸಲು ಸಿದ್ಧತೆ ನಡೆದಿದೆ.
ತಹಸೀಲ್ದಾರ್ ನವೀನ ಹುಲ್ಲೂರ, ಸಿಪಿಐ ವಿ.ಬಿ. ಹಿರೇಮಠ, ಪಿಎಸ್ಐ ಜಯಪಾಲ ಪಾಟೀಲ, ತಾಲೂಕು ಮತ್ತು ಸ್ಥಳೀಯ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿಗಳು ಗ್ರಾಮದ ಜನರಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳಲು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದ್ದಾರೆ.