ನವದುರ್ಗೆಯರ ತವರಲ್ಲಿ ಶರನ್ನವರಾತ್ರಿಗೆ ಸಜ್ಜು

Shakthidevathe
Published on

ಚಿತ್ರದುರ್ಗ: ಶರನ್ನವರಾತ್ರಿಯನ್ನು ಹಿಂದಿಗಿಂತಲೂ ವಿಶೇಷವಾಗಿ ಆಚರಿಸಲು ದೇವಿ ಆರಾಧನೆಯ ತವರಾದ ಕೋಟೆನಾಡಿನಲ್ಲಿ ಸಕಲ ಸಿದ್ಧತೆ ಭರದಿಂದ ಸಾಗಿದೆ. ಅ. 15ರಿಂದ ಆರಂಭವಾಗುವ ಮಹೋತ್ಸವಕ್ಕೆ ಈಗಾಗಲೇ ಶಕ್ತಿದೇವತೆಗಳ ದೇಗುಲಗಳು ಸಜ್ಜಾಗಿವೆ.

ಜಿಲ್ಲೆಯ ಹಲವೆಡೆ ನೂರಾರು ಶಕ್ತಿದೇವತೆಗಳು ನೆಲೆಯೂರಿದ್ದು, ಅಸಂಖ್ಯಾತ ಭಕ್ತಗಣ ಶ್ರದ್ಧಾಭಕ್ತಿಯಿಂದ ಆಚರಿಸಲು ಉತ್ಸುಕರಾಗಿದ್ದಾರೆ. ದೇಗುಲ, ಮನೆಗಳ ಸ್ವಚ್ಛತಾ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ನಿತ್ಯವೂ ನವೋಲ್ಲಾಸಕ್ಕೆ ಉತ್ಸವ ಸಾಕ್ಷಿಯಾಗಲಿದೆ.

ಈ ವೇಳೆ ಒಂಬತ್ತು ರಾತ್ರಿ, ಹತ್ತು ಹಗಲು ಶಕ್ತಿದೇವತೆಗಳನ್ನು ಪೂಜಿಸುವುದು ವೈಶಿಷ್ಟೃ. ಹೀಗಾಗಿ ನವ ಪುಷ್ಪ, ಧಾನ್ಯ, ತರಕಾರಿ, ಆಹಾರ ಪದಾರ್ಥ, ರೇಷ್ಮೆ ಸೀರೆ ಹೀಗೆ ವಿವಿಧ ಬಗೆಯ ವಸ್ತುಗಳಿಂದ ದೇವಿಯರ ಮೂರ್ತಿಗೆ ನಿತ್ಯ ವೈಭವೋಪೇತ ಅಲಂಕಾರ ಸೇವೆ ಜರುಗಲಿದೆ.

ಕೋಟೆನಗರಿಯ ನವದುರ್ಗೆಯರು ಸೇರಿ ಎಲ್ಲಾ ಶಕ್ತಿದೇವತೆಗಳಿಗೂ ನವರಾತ್ರಿ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು ನೆರವೇರಲಿದೆ. ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಕಣಿವೆಮಾರಮ್ಮ, ಚೌಡೇಶ್ವರಿ, ಬರಗೇರಮ್ಮ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲಗಳಲ್ಲಿ ಮೂಲ ಮತ್ತು ಉತ್ಸವಮೂರ್ತಿಗಳು ನವರಾತ್ರಿಯಲ್ಲಿ ವಿಶೇಷಾಲಂಕಾರದೊಂದಿಗೆ ಕಂಗೊಳಿಸಲಿವೆ. ಅ. 24ರವರೆಗೂ ಭಕ್ತರ ಕಣ್ಮನ ಸೆಳೆಯಲಿವೆ.

ಕಾಳಿಕಾಮಠೇಶ್ವರಿ, ಮಲೆನಾಡು ಚೌಡೇಶ್ವರಿ, ಸಿಂಗಧೂರು ಚೌಡೇಶ್ವರಿ, ಅಂಬಾಭವಾನಿ, ದಾನಮ್ಮ, ಗೋಪಾಲಪುರದ ದುರ್ಗಾಪರಮೇಶ್ವರಿ, ಕರುವಿನಕಟ್ಟೆ ವೃತ್ತದ ಅಂತರಘಟ್ಟಮ್ಮ, ಕೋಟೆಯಲ್ಲಿನ ಬನಶಂಕರಮ್ಮ, ಬುರುಜನಹಟ್ಟಿಯ ಬನಶಂಕರಿ, ರೇಣುಕಾಯಲ್ಲಮ್ಮ ದೇವಿ ದೇಗುಲಗಳಲ್ಲೂ ನವರಾತ್ರಿ ಉತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ.

ದಸರಾಗೆ ದೇವಿ ದೇಗುಲಗಳು ಅಷ್ಟೇ ಅಲ್ಲದೆ, ಶಿವ, ಗಣಪತಿ, ವೆಂಕಟೇಶ್ವರ ಸ್ವಾಮಿ ಹೀಗೆ… ಹಲವು ದೇಗುಲಗಳಲ್ಲಿ ವಿಶೇಷ ಪೂಜೆ ಜರುಗಲಿವೆ. ದೇವಿ ಮೂರ್ತಿ ಪ್ರತಿಷ್ಠಾಪಿಸಲು ಆನೆಬಾಗಿಲು ಸೇರಿ ಕೆಲವೆಡೆ ಪೆಂಡಾಲ್ ನಿರ್ಮಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net