

ಪಾಂಡವಪುರ : ನಾಲ್ಕೈದು ದಿನಗಳ ಹಿಂದೆ ಜನಿಸಿರುವ ನವಜಾತ ಗಂಡು ಶಿಶುವನ್ನು ಹೆತ್ತವರು ರಸ್ತೆ ಬದಿಯ ಮರದ ಬುಡದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಪ್ರಕರಣ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ತಾಲೂಕಿನ ಚಿಕ್ಕಮರಳಿ ಗ್ರಾಮದ ಗೇಟ್ ಮುಂಭಾಗದಲ್ಲಿ ಹರಿಯುವ ಲೋಕಪಾವನಿ ಹೊಳೆ ಸಮೀಪ ಪ್ರಪಂಚವನ್ನೇ ಕಣ್ಣು ತೆರೆದು ನೋಡದ ಗಂಡು ಮಗುವನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಇರಿಸಿ ಮರದ ಬುಡದ ಕೆಳಗಿಟ್ಟು ಹೆತ್ತವರು ಪರಾರಿಯಾಗಿದ್ದಾರೆ. ಮಗುವನ್ನು ಇತರರು ರಕ್ಷಿಸಲಿ ಎಂಬ ದೃಷ್ಟಿಯಿಂದ ಮಗುವಿಗೆ ಶಾಲು, ಟವೆಲ್ ಹಾಗೂ ತಲೆಗೆ ಸ್ಕಾರ್ಪ್ ಹೊದಿಸಿ ಯಾವುದೇ ತೊಂದರೆಯಾಗದಂತೆ ಸುರಕ್ಷಿತವಾಗಿ ಬಿಟ್ಟು ಹೋಗಿದ್ದಾರೆ.
ಬೆಳಗ್ಗೆ ಹೊಲ, ಗದ್ದೆಗಳಿಗೆ ತೆರಳುತ್ತಿದ್ದ ರೈತರು ಬುಟ್ಟಿಯಲ್ಲಿ ಮಗು ಅಳುತ್ತಿರುವ ಶಬ್ದ ಕೇಳಿ ತಕ್ಷಣ ಬುಟ್ಟಿ ತೆಗೆದು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆಂಬುಲೆನ್ಸ್ ಸಹಾಯದಿಂದ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಮಗುವಿಗೆ ಅಗತ್ಯ ಚಿಕಿತ್ಸೆ ಕೊಡಿಸಿದರು.
ಆರೋಗ್ಯಾಧಿಕಾರಿಗಳ ಕಾಳಜಿ: ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ ಅವರು ಮಗುವಿನ ಬಗ್ಗೆ ಕಾಳಜಿ ವಹಿಸಿ ಅಗತ್ಯ ಚಿಕಿತ್ಸೆ ನೀಡುವ ಜತೆಗೆ ಆರೋಗ್ಯ ಸಿಬ್ಬಂದಿಯೊಂದಿಗೆ ಮಂಡ್ಯಕ್ಕೆ ತೆರಳಿ ಹೆಚ್ಚಿನ ಚಿಕಿತ್ಸೆಗೆ ಮಗುವನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದರು.
ಬಳಿಕ ಮಾತನಾಡಿ, ಮಗುವಿನ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಯಾವುದೇ ತೊಂದರೆ ಇಲ್ಲ. ಆದರೂ ಎಚ್ಚರಿಕೆ ವಹಿಸಲು ಮುಂದಿನ ನಾಲ್ಕು ದಿನಗಳ ಕಾಲ ನಿಗಾ ಘಟಕದಲ್ಲಿ ಇರಿಸಲಾಗುವುದು ಎಂದು ಮಾಹಿತಿ ನೀಡಿದರು.
ಹೆತ್ತವರಿಗೆ ಹಿಡಿಶಾಪ: ಮಗುವನ್ನು ನೋಡಲು ಸೇರಿದ್ದ ನೂರಾರು ಸಂಖ್ಯೆಯ ಜನರು ಹೆತ್ತವರಿಗೆ ಹಿಡಿಶಾಪ ಹಾಕಿದರು. ಮಗು ಬೇಡವಾದ ಮೇಲೆ ಏತಕ್ಕಾಗಿ ಹೆರಬೇಕಾಯಿತು. ಹಸುಗೂಸನ್ನು ಬುಟ್ಟಿಯಲ್ಲಿ ಇಟ್ಟು ಹೋಗಿದ್ದಾರೆ. ಇವರಿಗೆ ಕರುಣೆ ಎನ್ನುವುದೇ ಇಲ್ಲವೇ? ಮುಂದಾದ ಮಗುವನ್ನು ಬಿಸಾಡಲು ಮನಸ್ಸಾದರೂ ಹೇಗೆ ಬಂತು ಎಂಬಿತ್ಯಾದಿಯಾಗಿ ಹೆತ್ತವರನ್ನು ಶಪಿಸಿದರು.