

ಚಿತ್ರದುರ್ಗ:ಶ್ರೀ ಜಗದ್ಗುರು ಜಯದೇವ ಶ್ರೀಗಳ 150 ನೇ ಜಯಂತ್ಯುತ್ಸವ ಆಚರಣೆ ನಮ್ಮೆಲ್ಲರ ಪುಣ್ಯವೆಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
ನಗರದ ಶ್ರೀ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಶ್ರೀ ವೀರಶೈವ ಸಮಾಜದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಶ್ರೀಮಠದ ಅನುಭಾವ ಶ್ರಾವಣ ಚಿಂತನ ಸರಣಿ ಮಾಲೆ ಸಮಾರೋಪದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜಯದೇವ ಜಗದ್ಗುರುಗಳ ಪಟ್ಟಾಧಿಕಾರ ಸಮಾರಂಭಕ್ಕೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು. ನವಕೋಟಿ ನಾರಾಯಣ ಮಠವೆಂಬ ಖ್ಯಾತಿಗೆ ಶ್ರೀಗಳು ಕಾರಣರಾಗಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಅನ್ನ, ಅರಿವು, ಆಶ್ರಯ ನೀಡುವ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು.
ಆಧ್ಯಾತ್ಮಿಕ, ಸಾಮಾಜಿಕ ಕಾರ್ಯಗಳಿಂದ ಜನಾನುರಾಗಿ ಮಠವನ್ನಾಗಿ ಬೆಳೆಸಿದ ಕೀರ್ತಿ ಜಯದೇವ ಶ್ರೀಗಳಿಗೆ. ಮೊದಲ ಬಾರಿಗೆ ಚಿತ್ರದುರ್ಗಕ್ಕೆ ರೈಲ್ವೆ ಸೌಲಭ್ಯಕ್ಕೆ ಒತ್ತಾಯಿಸಿ ಮೈಸೂರು ಮಹಾರಾಜರಿಗೆ ಶ್ರೀಗಳು ಪತ್ರ ಬರೆದಿದ್ದರು ಎಂದರು.
ನಗರದ ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಅವರು ಮಾತನಾಡಿ, ಎಲ್ಲರ ಮನಸ್ಸುಗಳಿಂದು ಯಾಂತ್ರೀಕೃತವಾಗುತ್ತಿವೆ. ಮನಸ್ಸಿಗೆ ನೆಮ್ಮದಿ, ಶಾಂತಿ ಇಲ್ಲದಾಗಿದೆ. ಇಂತಹ ಸಂದರ್ಭದಲ್ಲಿ ಏರ್ಪಡಿಸಿದ್ದ ಅನುಭಾವ ಶ್ರಾವಣ ಕಾರ‌್ಯಕ್ರಮ, ಶರಣರ ಮೌಲ್ಯಗಳನ್ನು ಅರಿಯಲು ಸಹಕಾರಿಯಾಗಿದೆ ಎಂದರು.
ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಅವರು ಮಾತನಾಡಿ, ಶ್ರೀ ಕೊಟ್ಟೂರು ಬಸವೇಶ್ವರರು ಮನೆ ಮನೆಗೆ ಬಸವಾದಿ ಶರಣರ ತತ್ವ ಪ್ರಚಾರ ಮಾಡಿದ್ದರು. ಶರಣರ ಆದರ್ಶಗಳನ್ನು ಕಾರ‌್ಯರೂಪಕ್ಕೆ ತಂದ ಪುಣ್ಯಾತ್ಮರು. ಕೊಟ್ಟೂರು ಬಸವೇಶ್ವರರು ಜಾತ್ಯತೀತ ನಿಲುವು ಹೊಂದಿದ್ದರು.
ಶ್ರೀ ಕೊಟ್ಟೂರು ಬಸವೇಶ್ವರರು ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ, ಅರಸೀಕೆರೆ ಶ್ರೀ ಕೋಲಶಾಂತಯ್ಯನವರು, ಶ್ರೀ ಕೆಂಪಯ್ಯನವರು ಮತ್ತು ಶ್ರೀ ಮದ್ದಾನೇಶರರು, ಈ ಪಂಚಗಣಾಧೀಶರಲ್ಲಿ ಒಬ್ಬರಾಗಿದ್ದಾರೆ. ಸಮಾಜದ ಮೌಢ್ಯ ಹೋಗಲಾಡಿಸಲು ಅವಿರತ ಶ್ರಮಿಸಿದ್ದಾರೆ ಎಂದ ಶ್ರೀಗಳು, ಜಯದೇವ ಶ್ರೀಗಳು ಶಾಂತವೀರ ಮುರುಗಿ ಸ್ವಾಮೀಜಿ 2 ನೇ ಅವತಾರವೆಂದು ಬಣ್ಣಿಸಿದರು.
ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ಮುರುಘಾಮಠದ ಶ್ರೀ ಮುರುಗೇಂದ್ರ ಸ್ವಾಮೀಜಿ, ವೀರಶೈವ ಸಮಾಜದ ಕಾರ‌್ಯದರ್ಶಿ ಪಿ.ವೀರೇಂದ್ರಕುಮಾರ್, ನಿರ್ದೇಶಕರಾದ ನಿರಂಜನ ದೇವರಮನೆ, ಗುತ್ತಿನಾಡು ಪ್ರಕಾಶ್, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ ಇತರರು ಇದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ಸಮಾಜದ ನಿರ್ದೇಶಕ ಎಸ್.ಷಡಕ್ಷರಯ್ಯ ಸ್ವಾಗತಿಸಿ, ಎಸ್.ವಿ. ಕೊಟ್ರೇಶ್ ವಂದಿಸಿದರು. ಉಪನ್ಯಾಸಕ ನವೀನ್ ಮಸ್ಕಲ್ ನಿರೂಪಿಸಿದರು.
(ಸಿಟಿಡಿ 3 ಅನುಭಾವ ಶ್ರಾವಣ)
ಚಿತ್ರದುರ್ಗದಲ್ಲಿ ಸೋಮವಾರ ಏರ್ಪಡಿಸಿದ್ದ ಮುರುಘಾಮಠದ ಅನುಭಾವ ಶ್ರಾವಣ ಸಮಾರೋಪದಲ್ಲಿ ಡಾ.ಶ್ರೀ ಬಸವಕುಮಾರ ಸ್ವಾಮೀಜಿ, ಡಾ.ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಬಸವನಾಗೀದೇವ ಸ್ವಾಮೀಜಿ, ಶ್ರೀ ಮುರುಗೇಂದ್ರ ಸ್ವಾಮೀಜಿ, ಎಚ್.ಎನ್.ತಿಪ್ಪೇಸ್ವಾಮಿ ಇತರರು ಇದ್ದರು.