

ಹಾಸನ: ರಾಷ್ಟ್ರೀಯ ಸೇವಾ ಯೋಜನೆ, ನವಕೀಸ್ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಸಾಮಾಜಿಕ ಅರಣ್ಯ ವಿಭಾಗ ಹಾಸನ ಇವರ ಸಹಯೋಗದಲ್ಲಿ ಬುಧವಾರ ವಿಶ್ವ ಪರಿಸರ ದಿನದ ಅಂಗವಾಗಿ ಸಸಿ ನೆಡುವ ಮತ್ತು ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಾಸನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಬಿ.ಆರ್. ಪೂರ್ಣಿಮಾ ಅವರು ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ 150ಕ್ಕೂ ಹೆಚ್ಚು ಸ್ವಯಂಸೇವಕರು ಕಾಲೇಜಿನ ಮುಂಭಾಗದ ರಸ್ತೆಯ ಎರಡು ಬದಿಗಳಲ್ಲಿ 300 ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯ ಶೋಭೆ ಹೆಚ್ಚಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಬಿ.ಆರ್.ಪೂರ್ಣಿಮಾ ಅವರು, ಹಾಸನ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾಡಾನೆಗಳ ಹಾವಳಿಯಿದ್ದು, ವನ್ಯಜೀವಿ ಹಾಗೂ ಮಾನವ ಸಂಘರ್ಷ ತಪ್ಪಿಸಬೇಕಾಗಿದೆ. ನಾವೆಲ್ಲರೂ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಪರಿಸರ ಉಳಿವಿಗೆ ನಾವೆಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ವೇಣುಗೋಪಾಲ ರಾವ್ ಅವರು, ಪರಿಸರ ಕಾಳಜಿ ಹಾಗೂ ಸಂರಕ್ಷಣೆ ಇಡೀ ಮನುಕುಲದ ಜವಾಬ್ದಾರಿಯಾಗಿದ್ದು, ಈ ದಿಸೆಯಲ್ಲಿ ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಿ ಪರಿಸರ ರಕ್ಷಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಮಹದೇವ್, ಖ್ಯಾತ ಲೇಖಕ ರವಿಕುಮಾರ್, ರಾಷ್ಟ್ರೀಯ ಸ್ವಯಂ ಸೇವಾ ಯೋಜನೆ ಅಧಿಕಾರಿ ಡಾ. ಮೋಹನ ಕುಮಾರ್ ಉಪಸ್ಥಿತರಿದ್ದರು.