ನವ ಭಾರತ ನಿರ್ಮಾಣಕ್ಕೆ ಬಾಬೂಜಿ ಕೊಡುಗೆ ಅಪಾರ: ಡಾ.ಎಲ್.ಹನುಮಂತಯ್ಯ

MYSORE
Published on

ಮೈಸೂರು: ನವ ಭಾರತ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆ ಕೊಟ್ಟವರಲ್ಲಿ ಡಾ.ಬಾಬು ಜಗಜೀವನರಾಮ್ ಕೂಡ ಮೇರುಸ್ತರದಲ್ಲಿ ನಿಲ್ಲುವಂತಹ ವ್ಯಕ್ತಿ ಎಂದು ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇವರು ಅಸ್ಪಶ್ಯತೆಯ ನಿವಾರಣೆಯ ವಿರುದ್ಧ ಮೌನವಾಗಿಯೇ ಹೋರಾಟ ಮಾಡಿ ದಲಿತ ಸಮುದಾಯದ ಧೀಮಂತ ನಾಯಕನಾಗಿ ಬೆಳೆದು ನಿಂತರು. ಬಾಲ್ಯದಲ್ಲೇ ಅಸ್ಪಶ್ಯತೆಗೆ ಒಳಗಾದ ಇವರು ತಮ್ಮ ಶಾಲಾ-ಕಾಲೇಜು ದಿನಗಳಲ್ಲೇ ಅದರ ವಿರುದ್ಧ ಹೋರಾಡಿದರು. ಅಂದಿನ ಕೇಂದ್ರ ಸರ್ಕಾರದಲ್ಲಿ 38ನೇ ವಯಸ್ಸಿಗೆ ಕಾರ್ಮಿಕ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು ಎಂದರೆ ಇವರಲ್ಲಿ ಎಂತಹ ಪ್ರಬುದ್ಧತೆ ಅಡಗಿತ್ತು ಎಂದು ನಾವು ಒಮ್ಮೆ ಯೋಚಿಸಲೇಬೇಕು ಎಂದರು.

ಕಾರ್ಮಿಕ ಸಚಿವರಾಗಿ ಬೇರೆ ದೇಶಗಳ ಕಾನೂನುಗಳನ್ನು ಅಧ್ಯಯನ ಮಾಡಿ ಕಾರ್ಮಿಕರ ಪರ ಕಾನೂನುಗಳನ್ನು ಜಾರಿಗೆ ತಂದರು. ವಿಶ್ವ ಕಾರ್ಮಿಕ ಮಂಡಳಿಯು ಭಾರತ ಕಾರ್ಮಿಕ ಕಾನೂನು ಅಳವಡಿಸಿಕೊಂಡು ಅದರ ಅನುಷ್ಠಾನಕ್ಕೆ ಮುಂದಾದದ್ದು ಬಾಬೂಜಿ ಅವರ ಅವಿರತ ಶ್ರಮಕ್ಕೆ ಒಂದು ಉದಾಹರಣೆ ಎಂದು ಹೇಳಿದರು.

ಕನಿಷ್ಠ ಕೂಲಿ ಕಾಯ್ದೆ ಜಾರಿ ಮಾಡಿ ತಳವರ್ಗದ ಸಮುದಾಯದಗಳಿಗೆ ಆರ್ಥಿಕ ಬೆನ್ನೆಲುಬಾಗಿ ನಿಂತರು. ಬಾಲ ಕಾರ್ಮಿಕ ನಿಷೇಧ ಕಾಯ್ದೆ ಜಾರಿಗೆ ತಂದು ವಿಮೋಚನೆಯ ಹರಿಕಾರ ಎಂದೆನಿಸಿಕೊಂಡರು. ಕೃಷಿ ಕಾರ್ಮಿಕರಿಗೆ ಕನಿಷ್ಠ ಕೂಲಿ ಜಾರಿಗೆ ತಂದು ಸಮಗ್ರ ಕೃಷಿ ವಲಯಕ್ಕೆ ಹೊಸ ರೂಪವನ್ನು ಕೊಟ್ಟರು ಎಂದು ಸ್ಮರಿಸಿದರು.

ಬಹುತೇಕ ಎಲ್ಲ ಇಲಾಖೆಗಳನ್ನು ನಿರ್ವಹಿಸಿ ದೇಶದ ಸರ್ವತೋಮುಖ ಬೆಳವಣಿಗೆಗೆ ಅವಿರತ ಕೊಡುಗೆ ನೀಡಿದ್ದಾರೆ. ಮೀಸಲಾತಿಯನ್ನು ಪರಿಣಾಕಾರಿಯಾಗಿ ಜಾರಿಗೆ ತಂದು ಎಲ್ಲ ಇಲಾಖೆಗಳಲ್ಲೂ ಕಾರ್ಮಿಕರಿಗೆ ಬಡ್ತಿ ಮೀಸಲಾತಿ ಕೊಟ್ಟವರು ಇವರು. ಅಸ್ಪಶ್ಯತೆ ನಿವಾರಣೆಗೆ ಕೊಡುಗೆ ಕೊಟ್ಟು ಆಹಾರ ಕ್ರಾಂತಿ ಮಾಡಿದ ಕಾರಣಕ್ಕಾಗಿ ಅವರನ್ನು ಹಸಿರು ಕ್ರಾಂತಿ ಹರಿಕಾರ ಎಂದು ಜನ ಪ್ರೀತಿಯಿಂದ ಕರೆಯುತ್ತಾರೆ ಎಂದರು.

ಈಗಿನ ಕೇಂದ್ರ ಸರ್ಕಾರವು ಶ್ರಮಿಕ ವರ್ಗಕ್ಕೆ ದೊಡ್ಡ ಹೊಡೆತ ಕೊಟ್ಟಿದೆ. ಜಾತೀಯತೆ ಈಗಲೂ ಮುಂದುವರಿದಿದೆ. ವ್ಯವಹಾರಿಕತೆ ಮತ್ತು ಸೈದ್ಧಾಂತಿಕತೆ ಒಟ್ಟಿಗೆ ಇರಲು ಸಾಧ್ಯವಿಲ್ಲ. ವ್ಯವಹಾರಗಳಿದ್ದರೆ ಅಲ್ಲಿ ಸಿದ್ಧಾಂತ ಉಳಿಯಲು ಸಾಧ್ಯವಿಲ್ಲ ಎಂದು ನುಡಿದರು.

ಭಾರತೀಯ ಸೇನೆಯ ನಿವೃತ್ತ ಸೇನಾಧಿಕಾರಿ ಕರ್ನಲ್ ಕೆ.ಪಿ ನರೇಂದ್ರ ಮಾತನಾಡಿ, ಬಾಬೂಜಿ ಜನಿಸಿದ ಸ್ಥಳದಲ್ಲಿ ಈಗಲೂ ಜಾತಿ ವ್ಯವಸ್ಥೆ ಇದೆ. ಇದು ದೇಶದ ದುರಂತ ಎಂದರು. ಬಾಬೂಜಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಸುಭಾಷ್ ಚಂದ್ರ ಬೋಸ್, ಗಾಂಧಿಯೊಂದಿಗೆ ಇದ್ದವರು. ಬಾಂಗ್ಲಾ ವಿಮೋಚನೆಯಲ್ಲಿ ಇವರ ಪಾತ್ರ ದೊಡ್ಡದು. ಅದನ್ನು ಭಾರತೀಯರು ಎಂದೂ ಮರೆಯುವಂತಿಲ್ಲ ಎಂದರು.

ವಿಶ್ವ ಮೈತ್ರಿ ಬೌದ್ಧ ವಿಹಾರದ ಡಾ.ಕಲ್ಯಾಣ ಬಂತೇಜಿ, ಮಾಜಿ ಸಚಿವ ಕೋಟೆ ಶಿವಣ್ಣ, ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಪಕ್ಷದ ವಿವಿಧ ಹಂತದ ಪದಾಧಿಕಾರಿಗಳಾದ ರಮೇಶ್, ಸಿದ್ದರಾಜು, ಹೆಡತಲೆ ಮಂಜುನಾಥ್, ಶಿವಣ್ಣ, ಎಂ.ಮಿಮಿಕ್ರಿ ದಯಾನಂದ್, ಶಿವಪ್ರಸಾದ್, ಕೆಪಿಸಿಸಿ ಕಾರ್ಯದರ್ಶಿಗಳಾದ ಶಿವನಾಗಪ್ಪ, ಮಂಜುಳಾ ಮಾನಸ, ಸುಧಾ ಮಹದೇವಯ್ಯ, ಹುಣಸೂರು ಬಸವಣ್ಣ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net