

ಕೊಡೇಕಲ್ : ಗ್ರಾಮದ ಹೊಸ ಬಡಾವಣೆಯ ಮನೆಗಳ ನಲ್ಲಿಗಳಲ್ಲಿ ಕಲುಷಿತ ನೀರು ಸರಬರಾಜು ಆಗುತ್ತಿದ್ದು, ಇದರಿಂದ ನಿವಾಸಿಗಳಿಗೆ ರೋಗದ ಭೀತಿ ಕಾಡುತ್ತಿದೆ.
ಪೊಲೀಸ್ ವಸತಿ ಗೃಹ ಬಳಿ ಇರುವ ಹೊಸ ಬಾವಿಗೆ ಗ್ರಾಮ ಪಂಚಾಯಿತಿ ನೀರೆತ್ತುವ ಯಂತ್ರ ಅಳವಡಿಸುವ ಮೂಲಕ ಹೊಸ ಬಡಾವಣೆಗಳ ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಈ ನೀರು ಕೆಟ್ಟ ದುರ್ವಾಸನೆಯಿಂದ ಕೂಡಿದ್ದು, ಯಾವುದಕ್ಕೂ ಬಳಸಲು ಯೋಗ್ಯವಿಲ್ಲದಂತಾಗಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.
ಹಾಗೊಂದು ವೇಳೆ ಈ ನೀರು ಬಳಕೆ ಮಾಡಿದರೆ ಚರ್ಮ ರೋಗ ಹರಡುವ ಭೀತಿ ಎಲ್ಲರಿಗೂ ಕಾಡುತ್ತಿದೆ. ಹೀಗಾಗಿ ಅನಿವಾರ್ಯ ಕಾರಣದಿಂದ ಬೇರಡೆ ಹೋಗಿ ಜನರು ನೀರು ತರುವಂತಾಗಿದೆ.
ಎರಡು ವರ್ಷದ ಹಿಂದಷ್ಟೆ ಬಾವಿಯ ನೀರು ಸಂಪೂರ್ಣ ಹೊರ ಹಾಕುವ ಮೂಲಕ ಸ್ಥಳೀಯರು ಸ್ವಚ್ಛಗೊಳಿಸಿದ್ದರು. ಇದಕ್ಕೆ ಗ್ರಾಮ ಪಂಚಾಯಿತಿ ನೀರೆತ್ತುವ ಯಂತ್ರ ಅಳವಡಿಸಿ ಹೊಸ ಬಡಾವಣೆಗೆ ಸರಬರಾಜು ಮಾಡುತ್ತಿದ್ದಾರೆ. ಆದರೆ ಈ ನೀರು ಬಳಕೆ ಮಾಡುವ ಹಾಗೆ ಇಲ್ಲ. ಹೀಗಾಗಿ ಕೂಡಲೇ ಈ ನೀರು ಸರಬರಾಜು ಸ್ಥಗಿತಗೊಳಿಸಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಬಡಾವಣೆ ನಿವಾಸಿಗಳು ಆಗ್ರಹಿಸಿದ್ದಾರೆ.