

ದಾವಣಗೆರೆ: ತಾಲೂಕಿನ ನಲ್ಕುಂದ ಗ್ರಾಮದಲ್ಲಿ, ತೊನ್ನು ಸಮಸ್ಯೆಗೀಡಾಗಿದ್ದ ಮಹಿಳೆ ಮೃತದೇಹ ಹೂತಿದ್ದಕ್ಕೆ ಮಳೆಯಾಗಿಲ್ಲ ಎಂಬ ಗ್ರಹಿಕೆಯಿಂದ ಗ್ರಾಮಸ್ಥರು ಶನಿವಾರ ರಾತ್ರಿ ಶವ ಹೊರತೆಗೆದು ಸುಡಲು ಯತ್ನಿಸಿದ್ದು, ಈ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ.
ಘಟನೆ ಹಿನ್ನೆಲೆಯಲ್ಲಿ ಮಾಯಕೊಂಡ ಠಾಣೆಯಲ್ಲಿ ಎರಡೂ ಗುಂಪುಗಳ ನಡುವೆ ದೂರು-ಪ್ರತಿದೂರು ದಾಖಲಾಗಿದ್ದು, 28 ಜನರನ್ನು ಬಂಧಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ರಾಮಗೊಂಡ ಬಸರಗಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಘಟನೆ ವಿವರ:
ಲಕ್ಷ್ಮಿದೇವಿ (60)ಎಂಬುವರು ವಯೋಸಹಜ ಕಾಯಿಲೆಯಿಂದಾಗಿ ಆ.4ರಂದು ಮೃತಪಟ್ಟಿದ್ದರು. ಅವರ ಜಮೀನಿನಲ್ಲೇ ಶವ ಸಂಸ್ಕಾರ ನಡೆಸಲಾಗಿತ್ತು. ನಂತರದ ದಿನಗಳಲ್ಲಿ ಸುತ್ತಮುತ್ತಲ ಗ್ರಾಮಗಳಲ್ಲಿ ಮಳೆಯಾಗಿದ್ದು, ನಲ್ಕುಂದದಲ್ಲಿ ಮಳೆಯಾಗಿರಲಿಲ್ಲ.
ಇದಕ್ಕೆ ತೊನ್ನು ಬಾಧಿತ ಮಹಿಳೆ ಶವ ಹೂತಿರುವುದೇ ಕಾರಣ ಎಂದು ಭಾವಿಸಿದ ಗ್ರಾಮಸ್ಥರು ತೀರ್ಮಾನಿಸಿದಂತೆ ಶನಿವಾರ ಮೃತದೇಹವನ್ನು ಹೊರತೆಗೆದು ಸುಡುವ ಪ್ರಯತ್ನಕ್ಕೆ ಮುಂದಾದರು.
ಈ ಹಂತದಲ್ಲಿ ಗ್ರಾಮದ ದುರುಗಮ್ಮ ದೇವಸ್ಥಾನ ಬಳಿ, ಸ್ವಾಮಿ ಮತ್ತು ನವೀನ್‌ಕುಮಾರ್ ನಡುವಿನ ಮಾತಿನ ಚಕಮಕಿ ಜಗಳವಾಗಿ ಗುಂಪು ಘರ್ಷಣೆಗೆ ತಿರುಗಿತು. ಕೆಲವರು ಹಲ್ಲೆಗೊಳಗಾದರು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.