

ರೇವಣಸಿದ್ದಪ್ಪ ಪಾಟೀಲ್ ಬೀದರ್
ನಾಲ್ಕು ವರ್ಷ ಹಿಂದೆ ಜಿಲ್ಲೆಗೆ ಮಂಜೂರಿಯಾಗಿದ್ದ ಸರ್ಕಾರಿ ಶುಶ್ರೂಷಕರ ಶಾಲೆ (ನರ್ಸಿಂಗ್ ಸ್ಕೂಲ್) ಇದೀಗ ಭವ್ಯವಾದ ಸ್ವಂತ ಕಟ್ಟಡ ಹೊಂದಿದೆ. ಇಲ್ಲಿನ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬ್ರಿಮ್ಸ್) ಆವರಣದಲ್ಲಿ ಮೂರು ಅಂತಸ್ತಿನಲ್ಲಿ ಸುಸಜ್ಜಿತ ಕಟ್ಟಡ ತಲೆ ಎತ್ತಿದ್ದು, ಲೋಕಾರ್ಪಣೆಗೆ ಸಿದ್ಧಗೊಂಡಿದೆ.
ಬ್ರಿಮ್ಸ್ ಬ್ಲಡ್ ಬ್ಯಾಂಕ್ ಹಿಂದಿರುವ ವಿಶಾಲ ಜಾಗದಲ್ಲಿ ಸುಂದರವಾದ ಕಟ್ಟಡ ನಿರ್ಮಾಣಗೊಂಡಿದೆ. ಮೂರು ವರ್ಷದ ನರ್ಸಿಂಗ್ ಕೋಸ್೯ ಬೇಕಾಗವ ಎಲ್ಲ ಅಗತ್ಯ ಸೌಲಭ್ಯಗಳನ್ನು ಕಟ್ಟಡದಲ್ಲಿ ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸ್ವಂತ ಸೂರು ಹೊಂದಿದ ಕಲಬುರಗಿ ಜತೆಗೆ ಇದೀಗ ಬೀದರ್ ನರ್ಸಿಂಗ್ ಸ್ಕೂಲ್ ಸಹ ಸೇರ್ಪಡೆಗೊಂಡಿದೆ.
2017-18ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನರ್ಸಿಂಗ್ ಸ್ಕೂಲ್ ಬಿಲ್ಡಿಂಗ್ ಗೆ 5 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಕಲಬುರಗಿ ಸಿಂಗಾಡೆ ಕನ್ಸ್ಟಕ್ಶನ್ ಗುತ್ತಿಗೆ ಪಡೆದಿದ್ದು, ಒಂದು ವರ್ಷದಲ್ಲಿ ಕಾಮಗಾರಿಯು ಬಹುತೇಕ ಮುಗಿದಿದ್ದು, ಶೀಘ್ರ ಕಟ್ಟಡ ಹಸ್ತಾಂತರ ನಡೆಯಲಿದೆ. ವರ್ಷಾಂತ್ಯದೊಳಗೆ ಲೋಕಾರ್ಪಣೆಯಾಗುವ ಸಾಧ್ಯತೆಗಳಿವೆ.
ಮೂರು ಅಂತಸ್ತಿನ ಕಟ್ಟಡದಲ್ಲಿ ತರಗತಿ ಕೋಣೆ, ಕಚೇರಿ, ಗ್ರಂಥಾಲಯ, ಆಡಿಟೋರಿಯಮ್ ಸೇರಿದಂತೆ 30 ಕೋಣೆಗಳಿವೆ. 100 ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ಈ ವಾರದಲ್ಲಿ ಎಲ್ಲ ಕೆಲಸ ಮುಗಿಸಿ ನರ್ಸಿಂಗ್ ಸ್ಕೂಲ್ ಪ್ರಾಚಾರ್ಯ ಅವರಿಗೆ ಕಟ್ಟಡ ಹಸ್ತಾಂತರಿಸಲು ಗುತ್ತಿಗೆದಾರರು ಸಿದ್ಧತೆ ಮಾಡಿಕೊಂಡಿದ್ದಾರೆ.
ವಸತಿನಿಲಯಕ್ಕೂ ಪ್ರಸ್ತಾವನೆ
ನರ್ಸಿಂಗ್ ಸ್ಕೂಲ್‌ಗೆ ಹೊಸ ಕಟ್ಟಡ ಸಿಕ್ಕಿದೆ. ಇದರ ಜತೆಗೆ ವಸತಿನಿಲಯಕ್ಕೂ ಸ್ವಂತ ಸೂರು ಅಗತ್ಯವಾಗಿದೆ. ನರ್ಸಿಂಗ್ ಸ್ಕೂಲ್ ಹಾಗೂ ವಸತಿನಿಲಯ ಕಟ್ಟಡಕ್ಕೆ ಸರ್ಕಾರಕ್ಕೆ ಏಕಕಾಲಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸ್ಕೂಲ್ ಬಿಲ್ಡಿಂಗ್ ಅನುದಾನ ಸಿಕ್ಕಿತಾದರೂ ವಸತಿನಿಲಯದ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ. ವಸತಿ ನಿಲಯಕ್ಕೆ 7 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ಬ್ರಿಮ್ಸ್ ಆವರಣದಲ್ಲಿ ಸದ್ಯ ಇರುವ ವಸತಿ ನಿಲಯದ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ವಸತಿನಿಲಯಕ್ಕೂ ಸರ್ಕಾರ ಅನುದಾನ ಒದಗಿಸಿ ನರ್ಸಿಂಗ್ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ನರ್ಸಿಂಗ್ ಸ್ಕೂಲ್ ಪ್ರಾಚಾರ್ಯ ರಾಜಕುಮಾರ ಮಾಳಗೆ.
ಕಟ್ಟಡದೆದುರು ಫ್ಲಾರೆನ್ಸ್ ಪ್ರತಿಮೆ
ನರ್ಸಿಂಗ್ ಸ್ಕೂಲ್ ಕಟ್ಟಡ ಎದುರು ನರ್ಸಿಂಗ್ ಪಿತಾಮಹ ಎಂದೇ ಖ್ಯಾತಿ ಹೊಂದಿರುವ ಫ್ಲಾರೆನ್ಸ್ ನೈಟಿಂಗೇಲ್ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡದ ಯೋಜನೆಯಲ್ಲಿ ಈ ಪ್ರತಿಮೆ ಇಲ್ಲ. ಆದರೆ ನರ್ಸಿಂಗ್ ಸ್ಕೂಲ್ ಪ್ರಾಚಾರ್ಯ ರಾಜಕುಮಾರ ಮಾಳಗೆ ಅವರು ವೈಯಕ್ತಿಕವಾಗಿ ಫ್ಲಾರೆನ್ಸ್ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದಾರೆ. ಕಟ್ಟಡದ ಮುಖ್ಯ ದ್ವಾರದ ಎಡ ಭಾಗದಲ್ಲಿ ಪ್ರತಿಮೆಗಾಗಿ ಕಟ್ಟೆ ನಿರ್ಮಿಸಲಾಗಿದೆ. ಕೋಲಾರ ಮೂಲದ ಶಿಲ್ಪಿಗೆ ಪ್ರತಿಮೆ ನಿರ್ಮಿಸುವ ಜವಾಬ್ದಾರಿ ನೀಡಲಾಗಿದೆ. ನರ್ಸಿಂಗ್ ಎಂದರೆ ಮೊದಲು ನೆನಪಿಗೆ ಬರುವುದು ಫ್ಲಾರೆನ್ಸ್ ನೈಟಿಂಗೇಲ್. ಶುಶ್ರೂಷಕರಿಗೆ ಫ್ಲಾರೆನ್ಸ್ ಅವರೇ ಉಸಿರು, ಹೆಸರು ಹಾಗೂ ಶಕ್ತಿ. ಹೀಗಾಗಿ ಫ್ಲಾರೆನ್ಸ್ ಅವರ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ನರ್ಸಿಂಗ್ ಪ್ರವೇಶ ಆರಂಭ
ಇಲ್ಲಿಯ ಸರ್ಕಾರಿ ನರ್ಸಿಂಗ್ ಸ್ಕೂಲ್ ಆರಂಭವಾಗಿ ನಾಲ್ಕು ವರ್ಷ ಪೂರ್ಣಗೊಂಡಿದೆ. ಮೂರು ವರ್ಷದ ನರ್ಸಿಂಗ್ ಕೋಸ್೯ನ ಮೊದಲ ಬ್ಯಾಚ್ ಕಳೆದ ವರ್ಷ ಮುಗಿಸಿದ್ದು, ಪ್ರಸಕ್ತ ಎರಡನೇ ಬ್ಯಾಚ್ ಮುಗಿಸುವ ಹಂತದಲ್ಲಿದೆ. 2020-21ನೇ ಸಾಲಿನ ನರ್ಸಿಂಗ್ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಆನ್ ಲೈನ್ ಅರ್ಜಿ ಸಲ್ಲಿಕೆ ಮುಕ್ತಾಯಗೊಂಡಿದೆ. ಮುಂದಿನ ತಿಂಗಳು ಕೌನ್ಸೆಲಿಂಗ್ ನಡೆಯಲಿದೆ. ಬೀದರ್ ನರ್ಸಿಂಗ್ ಕಾಲೇಜಿಗೆ 2016-17ರಲ್ಲಿ ಮೊದಲ ವರ್ಷ 83 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. 2017-18ನೇ ಸಾಲಿನಲ್ಲಿ 15 ಪ್ರವೇಶ, 2018-19ನೇ ಸಾಲಿನಲ್ಲಿ 24 ಹಾಗೂ 2019-20ನೇ ಸಾಲಿನಲ್ಲಿ 28 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಪ್ರಸಕ್ತ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಡಿಸೆಂಬರ್ ನಲ್ಲಿ ನಡೆಯುವ ಕೌನ್ಸೆಲಿಂಗ್ನಲ್ಲಿ ನರ್ಸಿಂಗ್ ಸ್ಕೂಲ್ ಆಯ್ಕೆ ನಡೆಯಲಿದೆ.
ನರ್ಸಿಂಗ್ ಸ್ಕೂಲ್ ಹೊಸ ಕಟ್ಟಡ ನಿರ್ಮಾಂಣ ಕೊನೇ ಹಂತದಲ್ಲಿದ್ದು ಶೀಘ್ರದಲ್ಲಿ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಕರೊನಾ ಹಿನ್ನೆಲೆಯಲ್ಲಿ ನೂತನ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಸರಳವಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಮೇಲಧಿಕಾರಿಗಳ ಜತೆ ಚರ್ಚೆ ನಡೆಸಿ ಶೀಘ್ರ ದಿನಾಂಕ ನಿಗದಿಪಡಿಸಲಾಗುವುದು.| ರಾಜಕುಮಾರ ಮಾಳಗೆಬೀದರ್ ನರ್ಸಿಂಗ್ ಸ್ಕೂಲ್ ಪ್ರಾಚಾರ್ಯ