

ಧಾರವಾಡ: ಹುಬ್ಬಳ್ಳಿಯ ಕಿಮ್ಸ್ನ ವೇದಾಂತ ಕೋವಿಡ್ ಕೇರ್ ಸೆಂಟರ್ನಲ್ಲಿ ಮಹಿಳೆಯೊಬ್ಬಳ ಸಾವಿಗೆ ನರ್ಸಿಂಗ್ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣ ಎಂಬ ಆರೋಪದ ಕುರಿತು ತನಿಖೆಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದಾರೆ.
ಕಮಲಾ (66) ಎಂಬ ಮಹಿಳೆ ಮೃತಪಟ್ಟವರು. ನರ್ಸಿಂಗ್ ಸಿಬ್ಬಂದಿ ಸೂಕ್ತ ಲಕ್ಷ್ಯಹಿಸದ ಕಾರಣ ಅವರು ಮೃತಪಟ್ಟಿರುವುದಾಗಿ ಕುಟುಂಬ ವರ್ಗದವರು ಆರೋಪಿಸಿದ್ದರು. ಈ ಬಗ್ಗೆ ಸೂಕ್ತ ತನಿಖೆ ಕೈಗೊಂಡು 24 ಗಂಟೆಯೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಯವರು ಮಂಗಳವಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸನಗೌಡ ಕರಿಗೌಡರಗೆ ಸೂಚಿಸಿದ್ದಾರೆ.
ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದಿಂದ ಅಗತ್ಯ ಮುಂಜಾಗ್ರತೆ ವಹಿಸಲಾಗಿದೆ. ಚಿಕಿತ್ಸೆಗೆ ಅಗತ್ಯ ಹಾಸಿಗೆ, ವೈದ್ಯಕೀಯ ಸೌಲಭ್ಯ, ಆಕ್ಸಿಜನ್, ಔಷಧ ವಿತರಣೆಗೆ ಕ್ರಮ ವಹಿಸಲಾಗಿದೆ. ಆದರೂ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ತನಿಖೆಗೆ ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ.
ಕೋವಿಡ್ ಸೋಂಕಿತರು ಜಿಲ್ಲಾಡಳಿತ ಆರಂಭಿಸಿರುವ ಉಚಿತ ಸಹಾಯವಾಣಿ +91 8047168111ಗೆ ಕರೆ ಮಾಡಿ ಬೆಡ್ ಲಭ್ಯತೆಯ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.
* ಕಿಮ್್ಸ ಅಧೀಕ್ಷಕರ ವಿವರಣೆ: ಕಿಮ್ಸ್ಗೆ ದಾಖಲಾಗಿದ್ದ ಕೋವಿಡ್ ಸೋಂಕಿತೆಗೆ ಇತರ ಕಾಯಿಲೆಗಳೂ ಇದ್ದವು. ಆಕೆಗೆ ಅಗತ್ಯ ಚಿಕಿತ್ಸೆ ನೀಡಲಾಗಿತ್ತು ಎಂದು ಕಿಮ್್ಸ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಚವ್ಹಾಣ ಮಂಗಳವಾರ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕೋವಿಡ್ ನಿಯಂತ್ರಣ ಕುರಿತ ಸಭೆಯಲ್ಲಿ ಮಾಹಿತಿ ನೀಡಿದರು.
ವೈದ್ಯರು ಹಾಗೂ ನರ್ಸ್ಗಳ ನಿರ್ಲಕ್ಷ್ಯದಿಂದ ಸೋಂಕಿತೆಯ ಸಾವು ಸಂಭವಿಸಿದೆ ಎಂಬುದು ಸರಿಯಲ್ಲ. ವೈದ್ಯರು ಮತ್ತು ನರ್ಸ್ಗಳ ಮಧ್ಯೆ ಕೆಲ ಮಟ್ಟಿನ ಸಂವಹನ ಸಮಸ್ಯೆ ಆಗಿದೆ. ಈ ಕುರಿತು ಪ್ರಾಥಮಿಕ ತನಿಖೆ ನಡೆಸಿದ್ದು, ನರ್ಸ್ಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗಂಭೀರ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.