ನರ್ಸಿಂಗ್ ವಿದ್ಯಾರ್ಥಿಗಳಿಗೆ ಮಾತುಗಾರಿಕೆ ಬಹುಮುಖ್ಯ

06rajesh2
Published on

ಚಾಮರಾಜನಗರ: ನರ್ಸಿಂಗ್ ವಿದ್ಯಾರ್ಥಿಗಳು ಉತ್ತಮವಾಗಿ ಮಾತುಗಾರಿಕೆ ಕೌಶಲ್ಯ ಬೆಳೆಸಿಕೊಂಡರೆ, ರೋಗಿಗಳಿಗೆ ಮಾತಿನಿಂದಲೇ ಆತ್ಮಸ್ಥೆರ್ಯ ತುಂಬುವ ಮೂಲಕ ಅವರನ್ನು ಗುಣಪಡಿಸಬಹುದಾಗಿದೆ ಎಂದು ಸಿಮ್ಸ್ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ.ಮಾರುತಿ ಸಲಹೆ ನೀಡಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಜೆಎಸ್‌ಎಸ್ ಕಾಲೇಜ್ ಆ್ ನರ್ಸಿಂಗ್ ಮತ್ತು ಜೆಎಸ್‌ಎಸ್ ಕಾಲೇಜ್ ಆ್ ಅಲೈಡ್ ಹೆಲ್ತ್ ಸೈನ್ಸಸ್ ವತಿಯಿಂದ ಬಿಎಸ್ಸಿ ನರ್ಸಿಂಗ್ ಹಾಗೂ ಅಲೈಡ್ ಹೆಲ್ತ್ ಸೈನ್ಸಸ್ ವಿದ್ಯಾರ್ಥಿಗಳಿಗೆ ಬುಧವಾರ ಆಯೋಜಿಸಿದ್ದ ವೈಟ್‌ಕೋಟ್ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ನರ್ಸಿಂಗ್ ತರಬೇತಿಗೆ ಬಂದಿರುವ ವಿದ್ಯಾರ್ಥಿಗಳು ಮೊದಲು ತಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿ ದೇಹ ಮತ್ತು ಮನಸ್ಸು ಚೆನ್ನಾಗಿದ್ದರೇ, ಆತನ ಆತ್ಮವೂ ಚೆನ್ನಾಗಿರುತ್ತದೆ. ನರ್ಸಿಂಗ್ ವಿದ್ಯಾರ್ಥಿಗಳು ರೋಗಿಗಳನ್ನು ನಗುಮುಖದಿಂದ ಮಾತನಾಡಿಸಬೇಕು. ಅವರಲ್ಲಿರುವ ಮಾನಸಿಕ ಒತ್ತಡವನ್ನು ಇದರಿಂದ ಕಡಿಮೆಮಾಡಬಹುದಾಗಿದೆ. ಉತ್ತಮ ಮಾತುಗಾರಿಕೆಯನ್ನು ಬೆಳೆಸಿಕೊಳ್ಳುವುದರಿಂದ ರೋಗಿಗಳಿಗೆ ಆತ್ಮಸ್ಥೆರ್ಯ ತುಂಬಬಹುದಾಗಿದೆ ಎಂದು ಸಲಹೆ ನೀಡಿದರು.

ಅಲ್ಪಜ್ಞಾನಿಗಳು ದೇವರನ್ನು ನಂಬುವುದಿಲ್ಲ, ಆದರೇ ಸಂಪೂರ್ಣ ಜ್ಞಾನವುಳ್ಳವರು ದೇವರನ್ನು ನಂಬುತ್ತಾರೆ. ಹಸಿದವರಿಗೆ ಅನ್ನ, ಅಕ್ಷರ ಜ್ಞಾನವನ್ನು ನೀಡುವುದು ಮಹತ್ತರವಾದ ಕಾರ್ಯವಾಗಿದೆ. ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ಈ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಅಂತಹ ಸಂಸ್ಥೆಯಲ್ಲಿ ತರಬೇತಿ ಪಡೆಯುವುದು ಪುಣ್ಯದ ಕಾರ್ಯವಾಗಿದೆ ಎಂದು ಹೇಳಿದರು.

ಸಿಮ್ಸ್ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್ ಮಾತನಾಡಿ, ಜಗತ್ತಿನಲ್ಲೇ ವೈದ್ಯಕೀಯ ಸೇವೆ ನೀಡುವುದು ಮಹತ್ತರವಾದ ಕರ್ತವ್ಯವಾಗಿದೆ. ಹಣ, ಅಂತಸ್ತು, ಆಸ್ತಿಗಿಂತಲೂ ಪ್ರತಿಯೊಬ್ಬ ವ್ಯಕ್ತಿ ಜೀವಕ್ಕೆ ದೊಡ್ಡ ಮೌಲ್ಯವಿದೆ. ಅಂತಹ ಜೀವಗಳನ್ನು ಉಳಿಸುವ ಕರ್ತವ್ಯವನ್ನು ನರ್ಸಿಂಗ್ ವಿದ್ಯಾರ್ಥಿಗಳು ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕರ್ತವ್ಯಕ್ಕೆ ನಿಷ್ಠರಾಗಿ ರೋಗಿಗಳಿಗೆ ಉತ್ತಮ ಸೇವೆ ನೀಡಿ ಎಂದು ಸಲಹೆ ನೀಡಿದರು.

ಈ ವೇಳೆ 3ನೇ ಬ್ಯಾಚ್ ಬಿಎಸ್ಸಿ ನರ್ಸಿಂಗ್ ಮತ್ತು 2ನೇ ಬ್ಯಾಚ್ ಅಲೈಡ್ ಹೆಲ್ತ್ ಸೈನ್ಸಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಬಿಳಿಕೋಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಆಸ್ಪತ್ರೆ ನ್ರೆಾಲಜಿಸ್ಟ್ ಸಲಹೆಗಾರ ಡಾ.ಕಾರ್ತಿಕ್ ಉಡುಪ, ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್, ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಜಿ.ವಿನಯ್ ಕುಮಾರ್, ಅಲೈಡ್ ಹೆಲ್ತ್ ಸೈನ್ಸಸ್ ಶೈಕ್ಷಣಿಕ ಸಂಯೋಜಕ ಸಿ.ಶಿವನಕಾರಪ್ಪ, ಜೆಎಸ್‌ಎಸ್ ಸಂಸ್ಥೆ ಸಂಪರ್ಕಾಧಿಕಾರಿ ಆರ್.ಎಂ.ಸ್ವಾಮಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net