

ಮೈಸೂರು: ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವುದರ ಜತೆಗೆ ಸಮುದಾಯ ಆಸ್ತಿಗಳನ್ನು ಸೃಜಿಸುವ ದೊಡ್ಡ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಮತ್ತು ಪಂಚಾಯತ್ ರಾಜ್ ತರಬೇತಿ ಸಂಸ್ಥೆ, ಗ್ರಾಮ ಸ್ವರಾಜ್ ಅಭಿಯಾನ ಸಹಯೋಗದಲ್ಲಿ ಬನ್ನಿಮಂಟಪದ ಒಡಿಪಿ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ವಿಭಾಗ ಮಟ್ಟದ ಕಾಯಕ ಬಂಧುಗಳ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಂ-ನರೇಗಾ ಅನುಷ್ಠಾನದ ಪ್ರಥಮ ಹಂತದಲ್ಲಿ ಕೂಲಿಕಾರರನ್ನು ಸಂಘಟಿಸಿ ಕೂಲಿ ಕೆಲಸಕ್ಕೆ ಕರೆತರುವ ಕಾಯಕ ಬಂಧುಗಳ ಪಾತ್ರ ಮುಖ್ಯವಾಗಿದೆ. ಇವರು ಸಮುದಾಯ ಹಾಗೂ ಗ್ರಾಮ ಪಂಚಾಯಿತಿಗೆ ಸಂಪರ್ಕ ಸೇತುವೆಯಾಗಿದ್ದಾರೆ ಎಂದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ (ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿವೆ. 2005ರಲ್ಲಿ ನರೇಗಾ ಪ್ರಾರಂಭವಾದ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ಸಮರ್ಪಕ ರಸ್ತೆ, ಚರಂಡಿಗಳು ಇರಲಿಲ್ಲ. ನಂತರದ 3-4 ವರ್ಷಗಳಲ್ಲಿ ಯೋಜನೆ ಮೂಲಕ ಎಲ್ಲ ಗ್ರಾಮದಲ್ಲೂ ಮೂಲಸೌಕರ್ಯ ಒದಗಿಸಲು ಸಾಧ್ಯವಾಗಿದೆ ಎಂದರು.
ದೇಶದ ಬೇರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನರೇಗಾ ಅಡಿ ಉತ್ತಮ ಕೂಲಿ ನೀಡಲಾಗುತ್ತಿದೆ. ದಕ್ಷಿಣ ಕರ್ನಾಟಕದಲ್ಲಿ ಕೂಲಿಕಾರರನ್ನು ಸಂಘಟಿಸಲು ಕಾಯಕ ಬಂಧುಗಳ ಅವಶ್ಯಕತೆ ಇದೆ. ಗ್ರಾಮೀಣ ಜನರ ಜೀವನಾಧಾರಕ್ಕೆ ನೆರವಾಗಬೇಕು ಎಂದು ತಿಳಿಸಿದರು.
ಪ್ರತಿಭೆ ಸಂಸ್ಥೆ ನಿರ್ದೇಶಕ ಜಿ.ಪ್ರಸನ್ನ ಮೂರ್ತಿ, ಜನಜಾಗೃತಿ ಸಂಸ್ಥೆ ನಿರ್ದೇಶಕ ವಿ.ಎನ್.ಮೂರ್ತಿ, ಎಚ್.ಡಿ.ಕೋಟೆ ನಿಸರ್ಗ ಫೌಂಡೇಷನ್ ನಿರ್ದೇಶಕ ಪ್ರಭು, ಗುಂಡ್ಲಪೇಟೆ ಟಾಡ್ರೋ ಸಂಸ್ಥೆ ನಿರ್ದೇಶಕ ಡಾ.ಮೋಹನ್ ಕೋಟೆಕೆರೆ, ಮಂಡ್ಯ ವಿಕಾಶನ ಸಂಸ್ಥೆ ನಿರ್ದೇಶಕ ಮಹೇಶ್ ಚಂದ್ರಗುರು, ಸ್ನೇಹ ಸಂಸ್ಥೆ ನಿರ್ದೇಶಕಿ ಹೇಮಾ, ಪರಿವರ್ತನ ಸಂಸ್ಥೆ ನಿರ್ದೇಶಕ ರಾಜೇಗೌಡ ಹಾಗೂ ಮಳವಳ್ಳಿ ಜನರಕ್ಷ ಸಂಸ್ಥೆ ನಿರ್ದೇಶಕ ಕೃಷ್ಣೇಗೌಡ ಇತರರು ಇದ್ದರು.