ನರೇಗಾದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಳ

25rajesh3
Published on

ಚಾಮರಾಜನಗರ: ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗುತ್ತಿದ್ದು, ಚಾಮರಾಜನಗರ ರಾಜ್ಯದಲ್ಲೇ 4ನೇ ಸ್ಥಾನವನ್ನು ಪಡೆದುಕೊಂಡಿದೆ.

ಜಿಲ್ಲಾ ಪಂಚಾಯಿತಿ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ 2019-20 ನೇ ಸಾಲಿನಲ್ಲಿ ಶೇ.50.13 ರಷ್ಟು ಮಹಿಳೆಯರು ನರೇಗಾ ಉದ್ಯೋಗದಲ್ಲಿ ಭಾಗಿಯಾಗಿದ್ದರು. 2020-21 ನೇ ಸಾಲಿನಲ್ಲಿ ಶೇ.51.75, 2021-22 ನೇ ಸಾಲಿನಲ್ಲಿ ಶೇ.52 ಮತ್ತು 2022-23 ನೇ ಸಾಲಿನಲ್ಲಿ 54.74 ಹಾಗೂ 2023-24 ನೇ ಸಾಲಿನಲ್ಲಿ ಶೇ.56.98 ರಷ್ಟು ಮಹಿಳೆಯರು ನರೇಗಾ ಉದ್ಯೋಗದಲ್ಲಿ ಭಾಗಿಯಾಗಿದ್ದಾರೆ. ಒಟ್ಟಾರೆ ಕಳೆದ 5 ವರ್ಷಗಳಲ್ಲಿ ಹೋಲಿಕೆ ಮಾಡಿದರೇ ನರೇಗಾದಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಸ್ತುತ ವರ್ಷದಲ್ಲಿ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಪುರುಷರಿಗಿಂತಲೂ ಹೆಚ್ಚಾಗಿ ಮಹಿಳೆಯರು ನರೇಗಾ ಉದ್ಯೋಗದಲ್ಲಿ ಭಾಗಿಯಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಹಿಳೆಯರಿಗೆ ನೀಡುವ ಕೂಲಿ ಮೊತ್ತ ಸರಾಸರಿ 150-200 ಆಗಿದ್ದು, ನರೇಗಾ ಯೋಜನೆಯ ಅಡಿಯಲ್ಲಿ ದಿನಕ್ಕೆ 349 ರೂ, ದೊರೆಯುತ್ತದೆ. ಈ ಕಾರಣಕ್ಕೆ ಮಹಿಳೆಯರ ಸಂಖ್ಯೆ ಹೆಚ್ಚಳವಾಗುತ್ತಿದೆ. ನಿರಂತರ ಮಳೆ ಹಾಗೂ ಇನ್ನಿತರೆ ಕಾರಣಗಳಿಂದ ಸ್ಥಳೀಯವಾಗಿ ಉದ್ಯೋಗ ದೊರೆಯದೇ ಇದ್ದ ಪರಿಣಾಮವಾಗಿಯೂ, ಮಹಿಳೆಯರು ನರೇಗಾ ಉದ್ಯೋಗದತ್ತ ಮುಖಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.ನರೇಗಾ ಉದ್ಯೋಗದಲ್ಲಿ ಮಹಿಳೆಯರು ಹೆಚ್ಚು ಭಾಗವಹಿಸುವ ಮೂಲಕ ಸ್ವಾವಲಂಬನೆ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಮತ್ತಷ್ಟು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾರೋತ್ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 4ನೇ ಸ್ಥಾನ:

ಜಿಲ್ಲೆಯಲ್ಲಿ ನರೇಗಾ ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದ್ದು, ಶೇ.56.98 ರಷ್ಟು ಪ್ರಗತಿಯೊಂದಿಗೆ ಚಾಮರಾಜನಗರ ರಾಜ್ಯದಲ್ಲೇ 4ನೇ ಸ್ಥಾನವನ್ನು ಪಡೆದುಕೊಂಡಿದೆ. ಗ್ರಾಮಗಳ ಅಭಿವೃದ್ಧಿಗೆ ತನ್ನದೇಯಾದ ವೈಶಿಷ್ಟ್ಯತೆಯನ್ನು ಪಡೆದುಕೊಂಡಿರುವ ನರೇಗಾ ಯೋಜನೆಯ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ 25.00 ಲಕ್ಷ ಮಾನವ ದಿನಗಳ ಸೃಜನೆ ಗುರಿ ನೀಡಲಾಗಿದೆ. ಈ ವರೆಗೆ 19.90 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿದ್ದು, ಡಿಸೆಂಬರ್ ಅಂತ್ಯಕ್ಕೆ ನೀಡಲಾದ 21.26 ಲಕ್ಷ ಮಾನವ ದಿನಗಳ ಗುರಿಗೆ ಶೇ.92.97 ರಷ್ಟು ಪ್ರಗತಿ ಸಾಧಿಸಿದೆ. ಇತ್ತೀಚಿಗೆ ಜಿಲ್ಲೆಯಲ್ಲಿರುವ ಶಾಲೆಗಳ ಮೂಲಸೌಕರ್ಯಗಳ ಅಗತ್ಯತೆಗಳನ್ನು ಪೂರೈಸಲು ಅಗತ್ಯವಿರುವ ಕಾಮಗಾರಿಗಳನ್ನು ನರೇಗಾದ ಮೂಲಕ ಕೈಗೆತ್ತಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ನರೇಗಾದಲ್ಲಿ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸಲಾಗುತ್ತಿದ್ದು, ಈ ಕಾರಣಕ್ಕೆ ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.

ಶಾಲೆಗಳ ಅಭಿವೃದ್ಧಿಗೆ ಆದ್ಯತೆ:

ಜಿಲ್ಲೆಯ ಶಾಲೆಗಳಲ್ಲಿ ನರೇಗಾ ಯೋಜನೆಯಡಿ ಶಾಲಾ ಕಾಂಪೌಂಡ್, ಶಾಲಾ ಶೌಚಾಲಯ, ಶಾಲಾ ಆಟದ ಮೈದಾನ ಹಾಗೂ ಅಡಿಗೆ ಮನೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 162 ಶಾಲಾ ಶೌಚಾಲಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, 65 ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿವೆ. ಉಳಿದಂತೆ 97 ಕಾಮಗಾರಿಗಳು ಪ್ರಗತಿಯಲ್ಲಿದೆ. 130 ಶಾಲೆಗಳಲ್ಲಿ ಕಾಂಪೌಂಡ್ ನಿರ್ಮಾಣದ ಗುರಿಯನ್ನು ಇಟ್ಟುಕೊಳ್ಳಲಾಗಿದ್ದು, 42 ಕಾಮಗಾರಿಗಳು ಭೌತಿಕವಾಗಿ ಮುಕ್ತಾಯಗೊಂಡಿದೆ. 130 ಶಾಲೆಗಳಲ್ಲಿ ಆಟದ ಮೈದಾನ ನಿರ್ಮಾಣಕ್ಕೆ ಪೂರಕವಾಗಿ 46 ಕಾಮಗಾರಿಗಳು ಭೌತಿಕವಾಗಿ ಮುಕ್ತಾಯಗೊಂಡಿದ್ದು, ಬಾಕಿ ಉಳಿದಿರುವ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ. ಒಟ್ಟಾರೆಯಾಗಿ ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.

ನರೇಗಾದಲ್ಲಿ ವಿವಿಧ ಕಾಮಗಾರಿಗಳು:

ಗ್ರಾಮೀಣ ಜನರಿಗೆ ಉದ್ಯೋಗ ನೀಡುವುದರೊಂದಿಗೆ ದುರ್ಬಲ ವರ್ಗದ ಕುಟುಂಬಗಳ ಸುಸ್ಥಿರ ಬದುಕಿಗೆ ನೆರವಾಗುವಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಪಾತ್ರ ಬಹುಮುಖ್ಯವಾಗಿದೆ. ಅದರಂತೆ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ, ಚರಂಡಿಗಳ ನಿರ್ಮಾಣ, ಅಂಗನವಾಡಿ ಕೇಂದ್ರ ನಿರ್ಮಾಣ, ಸಂಜೀವಿನಿ ಶೆಡ್, ಶಾಲಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಆಧಾರಿತ ಕೆರೆ ಕಟ್ಟೆಗಳ ಅಭಿವೃದ್ಧಿ, ಕಾಲುವೆಗಳ ಪುನಶ್ಚೇತನ, ಸಸಿ ನೆಡುವ ಕಾಮಗಾರಿ ಹಾಗೂ ಇನ್ನಿತರೆ ಹತ್ತುಹಲವು ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳಲಾಗುತ್ತಿದೆ. ದುರ್ಬಲ ವರ್ಗಗಳ ಕುಟುಂಬಗಳಿಗೆ ಅನುಕೂಲವಾಗುವಂತೆ ಕೊಟ್ಟಿಗೆ ನಿರ್ಮಾಣ, ಸೋಕ್ ಪಿಟ್ ನಿರ್ಮಾಣ, ತೋಟಗಾರಿಕೆ ಪ್ರದೇಶ ವಿಸ್ತರಣೆ, ಹಿಪ್ಪುನೇರಳೆ ಹಾಗೂ ಇನ್ನಿತರೆ ವೈಯಕ್ತಿಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ನರೇಗಾ ಯೋಜನೆಯು ತನ್ನದೇಯಾದ ಮಹತ್ವ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net