

ಬೆಳಗಾವಿ: ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತರಿ ಯೋಜನೆ (ನರೇಗಾ)ಯೋಜನೆಯು ಒಂದು ವರದಾನವಾಗಿದೆ. ಶಾಲಾ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸುವಲ್ಲಿ ಬೆಳಗಾವಿ ಜಿಲ್ಲೆಯು ಮುಂಚೂಣಿಯಲ್ಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಶಿಲ್ಪಾ ನಾಗ್ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ನರೇಗಾ ಜಲ ಸಂಜೀವಿನಿ ಕಾರ್ಯಕ್ರಮ ದೂರ ಸಂವೇದಿ ಮತ್ತು ಭೌಗೋಳಿಕ ಮಾಹಿತಿ ತಂತ್ರಜ್ಷಾನ ವ್ಯವಸ್ಥೆ ಆಧಾರಿತ ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಕಾಮಗಾರಿಗಳ ವೈಜ್ಞಾನಿಕ ಕ್ರಿಯಾ ಯೋಜನೆ ಮತ್ತು ಅನುಷ್ಠಾನದ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ ಚರಂಡಿ, ಸಿಸಿ ರಸ್ತೆ, ಗ್ರಾಮೀಣ ರಸ್ತೆಗಳು, ಗೋದಾಮು ನಿರ್ಮಾಣ, ಶೆಡ್ ನಿರ್ಮಾಣ, ರಾಜೀವ ಗಾಂಧಿ ಸೇವಾ ಕೇಂದ್ರ ಸ್ಮಶಾನಗಳ ಅಭಿವೃದ್ಧಿ ಇತ್ಯಾದಿ ಕಾಮಗಾರಿಗಳು ಸೇರಿ ಇತರ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಅನುಷ್ಠಾನ ಮಾಡಿ ಸಫಲರಾಗಿದ್ದೇವೆ ಎಂದರು.
ಶಾಲೆಗಳನ್ನು ಸಮಗ್ರ ಅಭಿವೃದ್ಧಿಪಡಿಸಲು, ಗ್ರಾಮೀಣ ಮಟ್ಟದಲ್ಲಿ ಬರುವ ಸರ್ಕಾರಿ ಶಾಲೆಗಳಲ್ಲಿ ಶೌಚಗೃಹ ನಿರ್ಮಾಣ, ಕಾಂಪೌಂಡ್ ನಿರ್ಮಾಣ, ಆಟದ ಮೈದಾನ (ಕಬಡ್ಡಿ, ಖೋಖೋ, ವಾಲಿಬಾಲ್ ರನ್ನಿಂಗ್ ಟ್ರ್ಯಾಕ್, ಬಾಸ್ಕೆಟ್ ಬಾಲ್) ಅಡುಗೆ ಕೋಣೆ ನಿರ್ಮಾಣ ಹಾಗೂ ಪೇವರ್ಸ್ ಅಳವಡಿಸುವ ಕಾಮಗಾರಿಗಳನ್ನು ಅನುಷ್ಠಾನ ಮಾಡುವುದರ ಮೂಲಕ ಗ್ರಾಮೀಣ ಶಾಲೆಗಳನ್ನು ಸಮಗ್ರ ಅಭಿವೃದ್ಧಿ ಪಡಿಸಲಾಗಿದೆ. ಶಾಲಾ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸುವಲ್ಲಿ ಬೆಳಗಾವಿ ಜಿಲ್ಲೆಯು ಮುಂಚೂಣಿಯಲ್ಲಿದೆ ಎಂದರು. ಜಿಪಂ ಸಿಇಒ ದರ್ಶನ್ ಎಚ್.ವಿ.ಮಾತನಾಡಿ, ಮಳೆ ನೀರು ವ್ಯರ್ಥವಾಗದೆ ಬಳಕೆಯಾಗುವ ನಿಟ್ಟಿನಲ್ಲಿ ಜಿಲ್ಲಾದ್ಯಂತ 241 ಹೊಸ ಕೆರೆ ಕಾಮಗಾರಿ ಗುರುತಿಸಿ, ಅದರಲ್ಲಿ 203 ಅನುಷ್ಠಾನ ಮಾಡಲಾಗಿದೆ ಎಂದರು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.