

ಬಸವಕಲ್ಯಾಣ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಪ್ರತಿ ಮನೆಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಸೌಲಭ್ಯಗಳ ಬಗ್ಗೆ ತಿಳಿಸಿ, ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಸಂತೋಷ ಚವ್ಹಾಣ್ ಹೇಳಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯ ೨೦೨೪-೨೫ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಹಮ್ಮಿಕೊಂಡ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನ ಹಾಗೂ ಮನೆ ಮನೆಗೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಭಿಯಾನದಲ್ಲಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಪಂಚಾಯಿತಿ ಸಿಬ್ಬಂದಿ, ಕಾಯಕ ಮಿತ್ರ ಸೇರಿ ಎಲ್ಲ ಅನುಷ್ಠಾನ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಬೇಕು. ವಾರ್ಡ್ಗಳ ಪ್ರತಿ ಮನೆ-ಮನೆಗೂ ಭೇಟಿ ನೀಡಿ ಯೋಜನೆ ಕುರಿತು ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಯೋಜನೆಯಡಿ ದೊರೆಯುವ ಕೂಲಿ ಮೊತ್ತ, ಕೂಲಿ ಪಡೆಯಲು ಬೇಕಾದ ಪ್ರಮಾಣ ಪತ್ರ, ವೈಯಕ್ತಿಕ ಸೌಲಭ್ಯ, ಅರ್ಹತೆ, ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ರಿಯಾಯಿತಿ, ಕಾಮಗಾರಿ ಸ್ಥಳದಲ್ಲಿ ಒದಗಿಸುವ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಭು ಬಿರಾದಾರ, ತಾಂತ್ರಿಕ ಸಂಯೋಜಕ ಶಿವರಾಜ ಪಾಟೀಲ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾವೇರಿ ಯಶ್ವಂತ ಕಾಂಬ್ಳೆ ಅಭಿಯಾನಕ್ಕೆ ಚಾಲನೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಮರನಾಥ ಮಿರ್ಲೆ, ಸದಸ್ಯರಾದ ಮಚ್ಛೇಂದ್ರ, ಲಕ್ಷ್ಮೀಕಾಂತ, ಶಿವರಾಜ, ಸಿದ್ಧಲಿಂಗ ಮೇತ್ರೆ, ಪ್ರಮುಖರಾದ ಅಶೋಕ ಉಚ್ಚೇಕರ್, ವೀರಾರೆಡ್ಡಿ, ಭೀಮರಾವ, ಕಪೀಲ ಇತರರಿದ್ದರು.