

ಕಿಕ್ಕೇರಿ: ಬಡವರ್ಗದ ಜನತೆಗೆ ನರೇಗಾ ಯೋಜನೆ ಬದುಕು ಕಟ್ಟಿಕೊಳ್ಳುವ ಕಾಮಧೇನು ಎಂದು ಶಾಸಕ ಎಚ್.ಟಿ. ಮಂಜು ಬಣ್ಣಿಸಿದರು.
ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಗ್ರಾಪಂ ವತಿಯಿಂದ ನೂತನ ರಾಜೀವ್‌ಗಾಂಧಿ ಸೇವಾ ಕೇಂದ್ರವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿ, ನರೇಗಾ ಕಾಮಗಾರಿಯಲ್ಲಿ ಯಾವುದೇ ಲೋಪವಿಲ್ಲದೆ ನೇರವಾಗಿ ಕಾರ್ಮಿಕರಿಗೆ ಬ್ಯಾಂಕ್ ಮೂಲಕ ಹಣ ಸಿಗಲಿದೆ. ಈ ಯೋಜನೆಯಿಂದ ರೈತರು ವೈಯಕ್ತಿಕ ಕೆಲಸ ಮಾಡಿಕೊಳ್ಳಬಹುದಾಗಿದೆ. ಬದು ನಿರ್ಮಾಣ, ಕೊಟ್ಟಿಗೆ, ಇಂಗುಗುಂಡಿ, ಕೃಷಿಹೊಂಡ, ಬದುಗಳಲ್ಲಿ ಗಿಡ ನೆಡುವಿಕೆಯಂತಹ ಹಲವು ಕಾಮಗಾರಿ ಮಾಡಿಕೊಳ್ಳಬಹುದಾಗಿದೆ. ರಸ್ತೆ ನಿರ್ಮಾಣ, ಒಳಚರಂಡಿಯಂತಹ ಹಲವು ಕಾಮಗಾರಿಗಳನ್ನು ಸಾಮೂಹಿಕವಾಗಿ ಮಾಡಿಕೊಳ್ಳಬಹುದಾಗಿದ್ದು, ಸದುಪಯೋಗಪಡಿಸಿಕೊಳ್ಳಿ ಎಂದರು.
ನಗರ ಪ್ರದೇಶಗಳಿಗೆ ವಲಸೆ ಹೋಗದೆ ಗ್ರಾಮಗಳಲ್ಲೇ ಬದುಕು ಕಟ್ಟಿಕೊಳ್ಳಲು ಮುಂದಾಗಿ. ಶಾಸಕನಾಗಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು ಬದ್ಧನಿದ್ದು, ಉತ್ತಮ ಜೀವನಶೈಲಿ ರೂಢಿಸಿಕೊಳ್ಳಲು ಮುಂದಾಗಿ. ಅರ್ಹ ಫಲಾನುಭವಿಗಳು ಜಾಬ್ ಕಾರ್ಡ್ ಮಾಡಿಸಿಕೊಳ್ಳಲು ಮುಂದಾಗಿ. ಈ ಯೋಜನೆಯಲ್ಲಿ ಯಂತ್ರಚಾಲಿತ ಕೆಲಸವಿಲ್ಲದೆ ಮಾನವನಿಗೆ ಕೆಲಸ ನೀಡಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಡುವುದು ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ಗಂಗೇನಹಳ್ಳಿ ರಘು, ಉಪಾಧ್ಯಕ್ಷೆ ಎಚ್.ಮಮತಾ, ನರೇಗಾ ಸಹಾಯಕ ನಿರ್ದೇಶಕ ನರಸಿಂಹರಾಜು, ಮನ್‌ಮುಲ್ ನಿರ್ದೇಶಕ ಡಾಲು ರವಿ, ಪಿಡಿಒ ಸುರೇಶ್‌ಬಾಬು, ಕಾರ್ಯದರ್ಶಿ ಬಿ.ಪಿ.ಯೋಗೇಶ್, ರಾಮಕೃಷ್ಣೇಗೌಡ, ಸದಸ್ಯರು ಮತ್ತಿತರರು ಹಾಜರಿದ್ದರು.
ಕಿಕ್ಕೇರಿ ಹೋಬಳಿಯ ಲಕ್ಷ್ಮೀಪುರ ಗ್ರಾಮದಲ್ಲಿ ಗ್ರಾಪಂ ವತಿಯಿಂದ ನೂತನ ರಾಜೀವ್‌ಗಾಂಧಿ ಸೇವಾ ಕೇಂದ್ರವನ್ನು ಶಾಸಕ ಎಚ್.ಟಿ. ಮಂಜು ಇತ್ತೀಚೆಗೆ ಉದ್ಘಾಟಿಸಿದರು. ರಘು, ಮಮತಾ, ನರಸಿಂಹರಾಜು, ಡಾಲು ರವಿ, ಸುರೇಶ್‌ಬಾಬು ಮತ್ತಿತರರು ಇದ್ದರು.