ನರೇಗಾ ಯೋಜನೆಯಡಿ ರಸ್ತೆ ಅಭಿವೃದ್ಧಿ : ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ

19 CRP 02
Published on



ಹಾಸನ : ನರೇಗಾ ಯೋಜನೆಯಡಿ 10 ಲಕ್ಷ ರೂ. ವೆಚ್ಚದಲ್ಲಿ ದುಗ್ಗೇನಹಳ್ಳಿ ಗ್ರಾಮದಿಂದ ಗಿರಿಕ್ಷೇತದವರೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸುವ ಮೂಲಕ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ ನೀಡಿದರು.

ಚನ್ನರಾಯಪಟ್ಟಣ ತಾಲೂಕಿನ ದುಗ್ಗೇನಹಳ್ಳಿ ಗ್ರಾಮದಲ್ಲಿ ಮೈದುಂಬಿ ಹರಿಯುತ್ತಿರುವ ಕೆರೆಗೆ ವಿಶೇಷ ಪೂಜೆ ಸಲ್ಲಿಸಿ ಬುಧವಾರ ಬಾಗಿನ ಸಮರ್ಪಿಸಿ ಮಾತನಾಡಿ, ಅಂಗನವಾಡಿ ಕೇಂದ್ರದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.


ದಾಸರಹಳ್ಳಿ ಗ್ರಾಮದಿಂದ ದುಗ್ಗೇನಹಳ್ಳಿಗೆ ಸಂಪರ್ಕ ಕಲ್ಪಿಸುವ 600 ಮೀ ಮುಖ್ಯ ರಸ್ತೆಯನ್ನು ಎರಡೂ ಬದಿ ಚರಂಡಿ ವ್ಯವಸ್ಥೆಯೊಂದಿಗೆ ಅಭಿವೃದ್ಧಿ ಪಡಿಸಲು ಅನುದಾನ ನೀಡಲಾಗುವುದು. ಗ್ರಾಮಕ್ಕೆ ಓವರ್ ಹೆಡ್ ಟ್ಯಾಂಕ್ ಮಂಜೂರಾಗಿದ್ದು, ಮನೆ ಮನೆಗೂ ನಲ್ಲಿಗಳ ಮೂಲಕ ನೀರು ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.


ಏಪ್ರಿಲ್ ನಂತರ ನಬಾರ್ಡ್ ಹಾಗೂ ಇತರೆ ಯೋಜನೆಗಳಡಿ ದುಗ್ಗೇನಹಳ್ಳಿ ಗ್ರಾಮದ ಕೆರೆಯ ಏರಿ ಹಾಗೂ ಕೋಡಿಯನ್ನು ಎತ್ತರಿಸುವ ಕಾಮಗಾರಿ ಕೈಗೊಳ್ಳಲಾಗುವುದು. ಅಲ್ಲದೆ ಕೆರೆ ಕೋಡಿ ಬಳಿ ನೀರು ಹರಿಯುವ ಹಳ್ಳ ಪ್ರದೇಶದಲ್ಲಿ ತೆಂಗಿನ ಸಸಿಗಳನ್ನು ಅಕ್ರಮವಾಗಿ ನೆಟ್ಟಿರುವವರ ಮೇಲೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಕಬ್ಬಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪೃಥ್ವಿಕುಮಾರ್, ಮಾಜಿ ಅಧ್ಯಕ್ಷ ರಾಜೇಗೌಡ, ಶಿವನಂಜೇಗೌಡ, ಸದಸ್ಯರಾದ ಟಿ.ಮಂಜೇಗೌಡ, ರತ್ನ ಕುಮಾರಸ್ವಾಮಿ, ಮಾಜಿ ಸದಸ್ಯ ಬಸವೇಗೌಡ, ಪಿಡಿಒ ಕಿರಣ್, ಕಾರ್ಯದರ್ಶಿ ಹನುಮೇಗೌಡ, ಪ್ರಮುಖರಾದ ರಾಮಕೃಷ್ಣ, ವೆಂಕಟೇಶ್, ಮಂಜುನಾಥ್, ಜಗದೀಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net