ನರೇಗಾ ನೋಂದಣಿ ಪ್ರಕ್ರಿಯೆ ಪ್ರಾರಂಭ

15_GBD__01
Published on

ಗೌರಿಬಿದನೂರು: ಸಂಕಷ್ಟದ ಸಂದರ್ಭದಲ್ಲಿ ದುಡಿಯುವ ಕೈಗಳಿಗೆ ನರೇಗಾ ನೆರವಾಗಲಿದೆ, ಯೋಜನೆ ದುರುಪಯೋಗ ಪಡಿಸಿಕೊಳ್ಳದೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಹೇಳಿದರು.

ಅಧಿಕಾರಿಗಳೊಂದಿಗೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿದರು.

ಕರೋನಾ ಸಂಕಷ್ಟದಿಂದಾಗಿ ದುಡಿಯುವ ಕೈಗಳು ಬರಿದಾಗಿವೆ, ಆದರೆ ಅಂತಹವರ ಪಾಲಿಗೆ ನರೇಗಾ ಯೋಜನೆ ವರದಾನವಾಗಿದೆ. ಈಗಾಗಲೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ನೋಂದಾಯಿಸಿಕೊಂಡು ಉದ್ಯೋಗದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ನರೇಗಾದಲ್ಲಿ ರೈತರಿಗೆ ವೈಯಕ್ತಿಕ ಲಾಭವಾಗುವಂತಹ ಕಾರ್ಯಕ್ರಮಗಳು ಸಾಕಷ್ಟಿವೆ. ಈ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಿ ಯೋಜನೆ ಯಶಸ್ವಿಗೆ ಶ್ರಮಿಸುವಂತೆ ಸೂಚಿಸಿದರು.

ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಸಮರ್ಪಕ ಸರಬರಾಜು ಹಾಗೂ ತೋಟಗಾರಿಕೆ ಕೃಷಿ, ರೇಷ್ಮೇ, ಮತ್ತು ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ನರೇಗಾ ಯೋಜನೆಯಡಿ ಹೆಚ್ಚಿನ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಜಿಪಂ ಸಿಇಒ ಬಿ.ೌಜೀಯಾ ತರುನ್ನುಮ್ ಸೂಚಿಸಿದರು.

ಜಿಪಂ ಸದಸ್ಯರಾದ ಭವ್ಯಾ ರಂಗನಾಥ್, ಪ್ರಮೀಳಾ ಪ್ರಕಾಶ್‌ರೆಡ್ಡಿ, ತಾಪಂ ಅಧ್ಯಕ್ಷ ಎಸ್.ಎಲ್.ಲೋಕೇಶ್, ಇಒ ಎನ್.ಮುನಿರಾಜು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

ಗ್ರಾಪಂ ವ್ಯಾಪ್ತಿಯಲ್ಲೇ ಕೆಲಸ: ಕಾದಲವೇಣಿ ಗ್ರಾಪಂನ ನಡೆಸುತ್ತಿರುವ ಕಾಮಗಾರಿ ಪರಿಶೀಲಿಸಿ, ಶಾಲಾ ಆವರಣದಲ್ಲಿ ಅಳವಡಿಸಲಾಗುತ್ತಿರುವ ಮಳೆ ಕೊಯ್ಲು ಪದ್ಧತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ರಜೆ ಪೂರ್ಣಗೊಳ್ಳುವುದರೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧ್ಯಕ್ಷರು ಸೂಚಿಸಿದರು. ನರೇಗ ಯೋಜನೆಯಲ್ಲಿ ನಿಮ್ಮ ಪಂಚಾಯಿತಿಗಳಲ್ಲೇ ಕೆಲಸ ದೊರೆಯಲಿದ್ದು, ಸೌಲಭ್ಯ ಪಡೆದುಕೊಳ್ಳುವಂತೆ ಪ್ರೌಢಶಾಲೆ ಕಾಂಪೌಂಡ್ ಕಾಮಗಾರಿ ಮಾಡುತ್ತಿದ್ದ ಕೂಲಿ ಕಾರ್ಮಿಕರಿಗೆ ತಿಳಿಸಿದರು. ರೇಷ್ಮೆ ಬೆಳೆಗಾರ ಆಂಜನಪ್ಪನ ತೋಟಕ್ಕೆ ಭೇಟಿ ನೀಡಿ, ಹಿಪ್ಪುನೇರಳೆ ಬೆಳೆಯಲು ಹನಿ ನೀರಾವರಿ, ರೇಷ್ಮೆ ಹುಳು ಸಾಕಾಣೆ ಮನೆ ನಿರ್ಮಾಣಕ್ಕೆ ಸಹಾಯಧನ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net