ನರೇಗಾ ಕೂಲಿ ರೂ.21 ಹೆಚ್ಚಳ,ಯೋಜನೆ ಸದ್ಭಳಕೆಗೆ ಜಿಪಂ ಸಿಇಒ ಮನವಿ

ctd...ceo visite mlk
Published on

ಚಿತ್ರದುರ್ಗ: ಪ್ರಸಕ್ತ ವರ್ಷದಿಂದ 21 ರೂ. ಹೆಚ್ಚಿಸುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ಗಂಡು ಮತ್ತು ಹೆಣ್ಣಿಗೆ ಸಮಾನವಾಗಿ 370 ರೂ.ಕೂಲಿ ಕೊಡಲಾಗುತ್ತದೆ ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಹೇಳಿದರು.

ಮೊಳಕಾಲ್ಮೂರು ತಾಲೂಕು ಅಶೋಕ ಸಿದ್ದಾಪುರ ಗ್ರಾಪಂನಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆ ಕೂಲಿ ಬೇಡಿಕೆ ಅಭಿಯಾನ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ನರೇಗಾದ 100 ದಿನಗಳ ಕೆಲಸದಲ್ಲಿ 37000 ರೂ.ದೊರೆಯಲಿದೆ.ಆದ್ದರಿಂದ ಉದ್ಯೋಗ ಅರಸಿ ಗುಳೆ ಹೋಗದೇ ತಮ್ಮ ಗ್ರಾಮಗಳಲ್ಲಿ ಲಭ್ಯವಿರುವ ನರೇಗಾ ಯೋಜನೆ ಕಾಮಗಾರಿಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

ತಮ್ಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಬೊಮ್ಮದೇವರಹಳ್ಳಿಯಲ್ಲಿ ನಡೆಯುತ್ತಿರುವ ಗೋಕಟ್ಟೆ ಹೂಳು ತೆಗೆಯುವ ಕಾಮಗಾರಿ ವೀಕ್ಷಿಸಿ, ಕೆಲಸಗಾರರೊಂದಿಗೆ ಸಂವಾದ ನಡೆಸಿದರು. ತಮ್ಮ ಕುಟುಂಬದಲ್ಲಿ 3-4 ವರ್ಷದ ಒಳಗಿನ ಮಕ್ಕಳಿದ್ದಲ್ಲಿ ಕೂಸಿನ ಮನೆಗೆ ಬಿಟ್ಟು ನೆಮ್ಮದಿಯಿಂದ ಕೆಲಸ ಮಾಡಬಹುದು. ಅಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಆರೈಕೆದಾರರು ಇದ್ದಾರೆ ಎಂದರು.

ಕೂಲಿ ಮೊತ್ತವನ್ನು ಸಕಾಲದಲ್ಲಿ ಪಾವತಿಸಬೇಕಂದು ಕೆಲಸಗಾರರು ಸಿಇಒ ಅವರಿಗೆ ಮನವಿ ಮಾಡಿದರು.

ಚಳ್ಳಕೆರೆ ತಾಲೂಕಿನ ಚೌಳೂರು ಗ್ರಾಮದಲ್ಲಿ ಅಟಲ್ ಭೂಜಲ ಯೋಜನೆಯಡಿ ಅಂತರ್ಜಲ ಮರುಪೂರಣಕ್ಕೆ ಪ್ರಾಯೋಗಿಕವಾಗಿ ನಿರ್ಮಿಸುತ್ತಿರುವ ಬಾವಿ ಪರಿಶೀಲಿಸಿದರು.

ಮೊಳಕಾಲ್ಮೂರು ತಾಪಂ ಇಒ ಹನುಮಂತಪ್ಪ, ಜಿಪಂ ನರೇಗಾ ಶಾಖೆಯ ಎಡಿಪಿಸಿ ಮೋಹನ್‌ಕುಮಾರ್, ಜಿಲ್ಲಾ ಐಇಸಿ ಸಂಯೋಜಕ ರವೀಂದ್ರನಾಥ್, ಸಹಾಯಕ ನಿರ್ದೇಶಕ ಗಣೇಶ್, ನರೇಗಾ ತಾಲೂಕು ತಾಂತ್ರಿಕ ಸಂಯೋಜಕ ಮಂಜುನಾಥ್, ತಾಲೂಕು ಐಇಸಿ ಸಂಯೋಜಕ ದೇವರಾಜ್, ತಾಲೂಕು ಎಂಐಎಸ್ ಸಂಯೋಜಕ ಮಧುಸೂಧನ್, ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net