

ಕಾನಹೊಸಹಳ್ಳಿ: ನರೇಗಾ ಕಾರ್ಮಿಕರಿಗೆ ಕೆಲಸ ಮತ್ತು ಕೂಲಿ ಹಣ ನೀಡುವುದಷ್ಟೇ ಅಧಿಕಾರಿಗಳ ಕೆಲಸವಲ್ಲ. ಕಾಮಗಾರಿ ಸ್ಥಳದಲ್ಲಿ ಕುಡಿವನೀರು ಮತ್ತು ಕಾರ್ಮಿಕರ ಆರೋಗ್ಯ ಸುರಕ್ಷತೆಯ ಕಾಳಜಿ ವಹಿಸುವುದು ಕೂಡ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಬೆಳಗಟ್ಟೆ ಗ್ರಾಪಂ ವ್ಯಾಪ್ತಿಯ ಹುಲಿಕುಂಟೆ ಸಮೀಪದ ಅರಣ್ಯದಲ್ಲಿ ಗೋಕಟ್ಟೆ ಹೂಳು ತೆಗೆಯುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸೋಮವಾರ ಮಾತನಾಡಿದರು. ನರೇಗಾ ದೇಶದ ಗ್ರಾಮೀಣ ಕಾರ್ಮಿಕರ ಪಾಲಿಗೆ ಮಹತ್ವದ ಯೋಜನೆಯಾಗಿದೆ. ಅರ್ಥಿಕ ವರ್ಷದಲ್ಲಿ 100 ದಿನ ಕೆಲಸ ನೀಡುವುದರೊಂದಿಗೆ ಕೂಲಿ ಹಣವನ್ನೂ ಹೆಚ್ಚು ಮಾಡಲಾಗಿದೆ ಎಂದರು.
ನರೇಗಾ ಯೋಜನೆಯನ್ನು ದೈನಂದಿನ ಜೀವನ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುವಂತೆ ಬಳಸಿಕೊಳ್ಳಬೇಕು. ಈ ಹಿಂದೆ ಕೆಲಸದ ವೇಳೆ ಕಾರ್ಮಿಕರು ಮೃತಪಟ್ಟಾಗ ಅವರ ಕುಟುಂಬದವರಿಗೆ ಸರ್ಕಾರದ ಅರ್ಥಿಕ ಶಕ್ತಿ ನೀಡಿದೆ. ಕ್ಷೇತ್ರ ವ್ಯಾಪ್ತಿಯ ಎಲ್ಲ ಪಿಡಿಒಗಳು, ಆರೋಗ್ಯ ಸಿಬ್ಬಂದಿ ಸಹಕಾರದೊಂದಿಗೆ ನರೇಗಾ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿಸಬೇಕು. ಈ ಕುರಿತ ವರದಿ ಸಲ್ಲಿಸಬೇಕೆಂದು ಪಿಡಿಒಗಳಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ತಿಳಿಸಿದರು.
ಬೆಳಗಟ್ಟೆ ಆರೋಗ್ಯ ಕೇಂದ್ರದ ಸಿಬ್ಬಂದಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರು. ಗ್ರಾಪಂ ಅಧ್ಯಕ್ಷೆ ಸಣ್ಣೋಬಮ್ಮ ಓಬಯ್ಯ, ತಾಪಂ ಇಒ ನರಸಪ್ಪ, ತಾಪಂ ಮಾಜಿ ಸದಸ್ಯ ಎನ್.ಪಿ.ಮಂಜುನಾಥ, ಪಿಡಿಒ ಹನುಮಂತಪ್ಪ, ಕಾರ್ಯದರ್ಶಿ ನಾಗರಾಜ, ಜೆಇ ಬಸವರಾಜಸ್ವಾಮಿ, ವೀರೇಶ್, ಡಿಇಒ ನರಸಿಂಹ, ಬಿಎಫ್‌ಟಿ ನಾಗರಾಜ ಇದ್ದರು.