

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ನರೇಗಲ್ಲ ಹೋಬಳಿಯು ಸುಮಾರು 34 ಸಾವಿರ ಹೆಕ್ಟೇರ್ ಕೃಷಿ ಜಮೀನು ಹೊಂದಿದ್ದು, ಶೇ.85ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ, ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಉಗ್ರಾಣವಿಲ್ಲದ ಕಾರಣ ಇಲ್ಲಿನ ರೈತರು ತಮ್ಮ ಉತ್ಪನ್ನಗಳನ್ನು ಅನಿವಾರ್ಯವಾಗಿ ಬೇಕಾಬಿಟ್ಟಿ ದರಕ್ಕೆ ಮಾರುತ್ತಿದ್ದಾರೆ.
ನರೇಗಲ್ಲ ಹೋಬಳಿಯ ರೈತರು ಮುಂಗಾರಿನಲ್ಲಿ ಹೆಸರು ಹಾಗೂ ಹಿಂಗಾರಿನಲ್ಲಿ ಕಡಲೆ, ಜೋಳ, ಗೋಧಿ ಹಾಗೂ ಉಳ್ಳಾಗಡ್ಡಿ, ಮೆಣಸಿನಕಾಯಿ ಬೆಳೆಯುತ್ತಾರೆ. ಹಿಂಗಾರಿನಲ್ಲಿ ಕಡಲೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಆದರೆ, ಅದನ್ನು ಸಂಗ್ರಹಿಸಲು ಯೋಗ್ಯ ಉಗ್ರಾಣವಿಲ್ಲದಿರುವುದು ರೈತರ ಚಿಂತೆಗೆ ಕಾರಣವಾಗಿದೆ. ಸ್ಥಿತಿವಂತ ರೈತರು ಗದಗನಲ್ಲಿನ ಉಗ್ರಾಣಗಳಲ್ಲಿ ತಮ್ಮ ಉತ್ಪನ್ನಗಳನ್ನು ಸಂಗ್ರಹಿಸುತ್ತಾರೆ. ಆದರೆ, ಸಾಗಾಟ ವೆಚ್ಚ ಹಾಗೂ ಖಾಸಗಿ ಉಗ್ರಾಣಗಳ ದುಬಾರಿ ಬಾಡಿಗೆ ಭರಿಸಲಾಗದೆ ಸಣ್ಣ ರೈತರು ಅನಿವಾರ್ಯವಾಗಿ ಬೇಕಾಬಿಟ್ಟಿ ದರಕ್ಕೆ ಉತ್ಪನ್ನ ಮಾರಾಟ ಮಾಡುವ ಸ್ಥಿತಿ ನಿರ್ವಣವಾಗಿದೆ.
ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಬರುವವರೆಗೂ ಸಣ್ಣ ಪ್ರಮಾಣದ ರೈತರು ತಮ್ಮ ಉತ್ಪನ್ನಗಳನ್ನು ತಮ್ಮಲ್ಲಿಯೇ ಶೇಖರಿಸಿಟ್ಟುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಉಗ್ರಾಣಗಳನ್ನು ಸ್ಥಾಪಿಸುವುದರಿಂದ ಈ ಸಣ್ಣ ಪ್ರಮಾಣದ ರೈತರು ತಮ್ಮ ತಮ್ಮ ಕೃಷಿ ಉತ್ಪನ್ನಗಳನ್ನು ಅಲ್ಲಿ ಸಂಗ್ರಹಿಸಿಟ್ಟು, ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಬಂದಾಗ ಮಾರಾಟ ಮಾಡಲು ಸಾಧ್ಯವಾಗುತ್ತದೆ.
ಪ್ರತಿವರ್ಷ ಹಿಂಗಾರಿನಲ್ಲಿ ಬೆಳೆಯಲಾಗುವ ಕಡಲೆಯನ್ನು ಗದಗನ ಉಗ್ರಾಣಗಳಿಗೆ ರವಾನಿಸಲಾಗುತ್ತಿದೆ. ಅಲ್ಲಿಯೂ, ಸರ್ಕಾರಿ ಗೋದಾಮುಗಳು ರೈತರಿಗೆ ಲಭ್ಯವಾಗುವುದಿಲ್ಲ. ಆದ್ದರಿಂದ, ಹೆಚ್ಚಿನ ಹಣ ನೀಡಿ ಖಾಸಗಿ ಉಗ್ರಾಣದಲ್ಲಿ ಕಡಲೆಯನ್ನು ಸಂಗ್ರಹಿಸಲಾಗುತ್ತದೆ. ನರೇಗಲ್ಲ ಹೋಬಳಿಯಿಂದ ಪ್ರತಿ ವರ್ಷ ಸುಮಾರು 10 ಸಾವಿರ ಮೆಟ್ರಿಕ್ ಟನ್ ಕಡಲೆ ಗದಗ ಪಟ್ಟಣದ ಖಾಸಗಿ ಉಗ್ರಾಣಗಳಲ್ಲಿ ಸಂಗ್ರಹವಾಗುತ್ತದೆ. ಆದ್ದರಿಂದ, ಜಕ್ಕಲಿ ರಸ್ತೆಯಲ್ಲಿನ ಎಪಿಎಂಸಿಯಲ್ಲಿ 10 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಉಗ್ರಾಣ ನಿರ್ಮಾಣ ಮಾಡಬೇಕು ಎಂಬುದು ಇಲ್ಲಿನ ರೈತರ ಆಗ್ರಹವಾಗಿದೆ.
ಉಗ್ರಾಣದಲ್ಲಿ ಸಂಗ್ರಹಿಸುವುದರಿಂದ ಆಗುವ ಲಾಭಗಳು: ರೈತರು ದಾಸ್ತಾನು ಮಾಡಿದ ಸರಕುಗಳಿಗೆ ಸಂಪೂರ್ಣ ಭದ್ರತೆ ನೀಡಿ ವೈಜ್ಞಾನಿಕವಾಗಿ ಸಂರಕ್ಷಿಸಲಾಗುತ್ತದೆ. ಗೋದಾಮುಗಳಲ್ಲಿ ಸಂಗ್ರಹಿಸಿದ ಸರಕುಗಳಿಗೆ ವಿಮೆ ಒದಗಿಸಲಾಗುತ್ತದೆ. ಸಂಗ್ರಹಿಸುವ ದಾಸ್ತಾನಿನ ಮೇಲೆ ವಿಧಿಸುವ ಸಂಗ್ರಹಣಾ ಶುಲ್ಕದಲ್ಲಿ ರೈತರಿಗೆ ಶೇ.15 ರಷ್ಟು, ಮಹಿಳೆಯರಿಗೆ ಶೇ.20 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ.25 ರಷ್ಟು ರಿಯಾಯಿತಿ ಇರುತ್ತದೆ. ಠೇವಣಿದಾರರು ಉಗ್ರಾಣ ರಸೀದಿಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಸೌಲಭ್ಯ ಪಡೆಯಬಹುದು. ಉಗ್ರಾಣಗಳಲ್ಲಿ ಠೇವಣಿಯಿಟ್ಟ ಸರಕನ್ನು ಒಂದೇ ಬಾರಿ ಸಂಪೂರ್ಣವಾಗಿ ಬಿಡಿಸಿಕೊಳ್ಳಬೇಕೆಂದಾಗಲಿ, ಬ್ಯಾಂಕಿನಿಂದ ಪಡೆದ ಮುಂಗಡವನ್ನು ಒಂದೇ ಬಾರಿ ಸಂಪೂರ್ಣವಾಗಿ ಮರು ಪಾವತಿ ಮಾಡಬೇಕೆಂದಾಗಲಿ ಯಾವ ನಿರ್ಬಂಧವೂ ಇರುವುದಿಲ್ಲ.
ನರೇಗಲ್ಲ ಹೋಬಳಿಯು ಕೃಷಿ ಆಧಾರಿತ ಪ್ರದೇಶವಾಗಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಇಲ್ಲಿ ಯಾವುದೇ ಕೃಷಿಗೆ ಪೂರಕ ಸೌಲಭ್ಯಗಳಿಲ್ಲ. ಇದರಿಂದಾಗಿ ರೈತರು ಸತತವಾಗಿ ನಷ್ಟ ಅನುಭವಿಸುವ ಸ್ಥಿತಿ ನಿರ್ವಣವಾಗಿದೆ. ಉಪ ಕೃಷಿ ಮಾರುಕಟ್ಟೆ ಇದ್ದೂ ಇಲ್ಲದಂತಾಗಿದೆ. ರೈತರು ತಮ್ಮ ಉತ್ಪನ್ನಗಳನ್ನು ಸಂಗ್ರಹಿಸಲು ಪರದಾಡುವುದು ಸಾಮಾನ್ಯವಾಗಿದೆ. ನರೇಗಲ್ಲ ಪಟ್ಟಣದಲ್ಲಿ ಶಾಶ್ವತ ಖರೀದಿ ಕೇಂದ್ರ ಹಾಗೂ ಉಗ್ರಾಣಗಳ ನಿರ್ವಣಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು.| ಶರಣಪ್ಪ ಧರ್ವಯತ, ಆನಂದ ಕೋಟಗಿ, ರೈತ ಸೇನಾ ಮುಖಂಡರು, ನರೇಗಲ್ಲ
ನರೇಗಲ್ಲ ಪಟ್ಟಣದಲ್ಲಿ ಉಗ್ರಾಣ ನಿಗಮದಿಂದ ಗೋದಾಮು ನಿರ್ವಣಕ್ಕೆ ಶೀಘ್ರದಲ್ಲಿ ಉಗ್ರಾಣ ನಿಗಮದ ಅಧಿಕಾರಿಗಳೊಂದಿಗೆ ರ್ಚಚಿಸಲಾಗುವುದು. ಉಗ್ರಾಣ ನಿರ್ವಣಕ್ಕೆ ಜಮೀನು ಹಾಗೂ ಇನ್ನಿತರ ಅಗತ್ಯಗಳ ಬಗ್ಗೆ ರ್ಚಚಿಸಿ ಉಗ್ರಾಣ ನಿರ್ವಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.| ಕೆಳಕಪ್ಪ ಬಂಡಿ, ರೋಣ ಶಾಸಕ