

ನರೇಗಲ್ಲ: ರಾಜ್ಯ ಸರ್ಕಾರದ ನಿರ್ದೇಶನದಂತೆ ಗದಗ ಜಿಲ್ಲೆಯಲ್ಲಿ ರೈತರಿಂದ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ಕಡಲೆ ಖರೀದಿಸಲು ಜಿಲ್ಲಾಡಳಿತ ಮುಂದಾಗಿದೆ. ಅದರಂತೆ ಫೆ.14 ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜರುಗಿದ ಟಾಸ್ಕ್ಫೋರ್ಸ್ ಸಭೆಯಲ್ಲಿ ಜಿಲ್ಲಾದ್ಯಂತ ಪ್ರಾರಂಭವಾಗಲಿರುವ ಖರೀದಿ ಕೇಂದ್ರಗಳನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಜಿಲ್ಲೆಯಲ್ಲಿಯೇ ಅತಿ ದೊಡ್ಡ ಹೋಬಳಿಯಾಗಿರುವ ನರೇಗಲ್ಲದ ಹೆಸರಿಲ್ಲದಿರುವುದು ಇಲ್ಲಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ನರೇಗಲ್ಲ ಪಟ್ಟಣ ಸೇರಿ ಕೋಡಿಕೊಪ್ಪ, ಕೋಚಲಾಪೂರ, ಮಲ್ಲಾಪೂರ, ದ್ಯಾಂಪೂರ ಗ್ರಾಮದ ಅಂದಾಜು 15038 ಎಕರೆ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದೆ. ಉತ್ತಮ ಮಳೆಯ ಫಲದಿಂದ ಇಳುವರಿ ಉತ್ತಮವಾಗಿ ಬಂದಿದೆ. ಆದರೆ, ಈ ಎಲ್ಲ ಗ್ರಾಮಗಳ ರೈತರು ಪಕ್ಕದ ಅಬ್ಬಿಗೇರಿ ಅಥವಾ ಜಕ್ಕಲಿ ಗ್ರಾಮಗಳಿಗೆ ಹೋಗಬೇಕಾಗುತ್ತದೆ. ನರೇಗಲ್ಲನಲ್ಲಿ ಎರಡು ಸಂಸ್ಥೆಗಳಿದ್ದರೂ ಇಲ್ಲಿ ಖರೀದಿ ಕೇಂದ್ರವನ್ನು ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ಬಾರಿ ಪ್ರತಿ ಎಕರೆಗೆ 4-5 ಕ್ವಿಂಟಾಲ್ ಇಳುವರಿ ಬಂದಿದ್ದು, ಅದರಂತೆ ನರೇಗಲ್ಲ ಪ.ಪಂ. ವ್ಯಾಪ್ತಿಯ 15038 ಎಕರೆ ಪ್ರದೇಶದಲ್ಲಿ ಅಂದಾಜು 60152 ಕ್ವಿಂಟಾಲ್ ಕಡಲೆ ದಾಸ್ತಾನು ಇದ್ದು, ನರೇಗಲ್ಲನಲ್ಲಿಯೇ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎನ್ನುವುದು ರೈತರ ಆಗ್ರಹವಾಗಿದೆ.
ಮಿತಿ ಸಡಿಲಗೊಳಿಸಿ: ಕಡಲೆ ಖರೀದಿ ಕೇಂದ್ರದಲ್ಲಿ ಒಬ್ಬ ರೈತನಿಂದ ಕೇವಲ 10 ಕ್ವಿಂಟಾಲ್ ಖರೀದಿಸಲು ಮಿತಿಗೊಳಿಸಿರುವುದು ಅವೈಜ್ಞಾನಿಕವಾಗಿದೆ. ಈ ಬಾರಿ ಎಕರೆಗೆ 4-5 ಕ್ವಿಂಟಾಲ್ ಇಳುವರಿ ಬಂದಿದ್ದು, 10 ಕ್ವಿಂಟಾಲ್ ಮಿತಿಯನ್ನು ತೆರವುಗೊಳಿಸಿ, ಪೂರ್ಣ ಪ್ರಮಾಣದಲ್ಲಿ ಖರೀದಿಗೆ ಜಿಲ್ಲಾಡಳಿತ ಮುಂದಾಗಬೇಕು. ನರೇಗಲ್ಲ ಹೋಬಳಿಯ ನರೇಗಲ್ಲ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ ಗ್ರಾಮಗಳಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ನರೇಗಲ್ಲನ ರೈತ ಸೇನೆಯ ನೇತೃತ್ವದಲ್ಲಿ ಇತ್ತೀಚೆಗೆ ಜಿಲ್ಲಾಡಳಿತ ಭವನದ ಮುಂದೆ ಎರಡು ದಿನ ಅಹೋರಾತ್ರಿ ಧರಣಿ ಕೈಗೊಳ್ಳಲಾಗಿತ್ತು. ಅದರಂತೆ ಖರೀದಿ ಕೇಂದ್ರ ಪ್ರಾರಂಭಿಸಲಾಗಿದೆ. ಆದರೆ, ನರೇಗಲ್ಲ, ಹಾಲಕೆರೆ, ನಿಡಗುಂದಿ ಗ್ರಾಮಗಳಲ್ಲಿ ಖರೀದಿ ಕೇಂದ್ರ ಪ್ರಾರಂಭಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನರೇಗಲ್ಲನಲ್ಲಿ ಕಡಲೆ ಖರೀದಿ ಕೇಂದ್ರ ಪ್ರಾರಂಭಕ್ಕೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಪವಾಸ ಧರಣಿ ಕೈಗೊಳ್ಳಲಾಗುತ್ತದೆ. | ಚಂದ್ರು ಹೊನವಾಡ, ಆನಂದ ಕೋಟಗಿ, ರೈತ ಸೇನಾ ಮುಖಂಡರು ನರೇಗಲ್ಲ