ನರೇಂದ್ರಸ್ವಾಮಿ ಹೇಳಿಕೆಗೆ ಅನ್ನದಾನಿ ಆಕ್ರೋಶ : ಜೆಡಿಎಸ್ ಕಾರ್ಯಕರ್ತರ ಸಭೆ

26 mlv 2
Published on
  • ಮಂಡ್ಯ : ದೇಶದ ಪ್ರಧಾನಿ ಹಾಗೂ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾದ್ದ ಪಕ್ಷವನ್ನು ಪುಟ್ಗೋಸಿ ಪಕ್ಷವೆಂದು ಲೇವಡಿ ಮಾಡಿರುವ ಮಾಜಿ ಶಾಸಕ ನರೇಂದ್ರಸ್ವಾಮಿ ವಿರುದ್ಧ ಸೇಡು ತೀರಿಸಿಕೊಳ್ಳಲು ಜೆಡಿಎಸ್ ಕಾರ್ಯಕರ್ತರ ರಕ್ತ ಕುದಿಯುತ್ತಿದೆ ಎಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.
  • ಮಳವಳ್ಳಿ ತಾಲೂಕಿನ ಬಂಡೂರು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ನರೇಂದ್ರಸ್ವಾಮಿ ತನ್ನ ಅಧಿಕಾರಾವಧಿಯಲ್ಲಿ ಈ ಕ್ಷೇತ್ರದ ಜನರನ್ನು ಭಯದ ವಾತಾವರಣದಲ್ಲಿರಿಸಿಕೊಂಡು ದುರಹಂಕಾರ ಹಾಗೂ ದರ್ಪದಿಂದ ದುರಾಡಳಿತವನ್ನು ಮಾಡಿದ್ದಾರೆ. ಅನಿರೀಕ್ಷಿತವಾಗಿ ಬಿಜೆಪಿ ಸರ್ಕಾರದಲ್ಲಿ ಸಿಕ್ಕ ಅಧಿಕಾರವನ್ನು ತನ್ನ ದುಷ್ಟ ನಡೆಯಿಂದ ಕಳೆದುಕೊಂಡು, ಅವಕಾಶ ಕಲ್ಪಿಸಿಕೊಟ್ಟಿದ್ದ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರವನ್ನು ಅಶ್ಲೀಲ ಪದಬಳಕೆಯಿಂದ ನಿಂದಿಸಿದ್ದಾನೆ. ಈತನ ಅಹಂಕಾರದ ಪರಮಾವಧಿಯಿಂದ ಈ ಕ್ಷೇತ್ರಕ್ಕೆ ಆರು ತಿಂಗಳು ಶಾಸಕನೇ ಇಲ್ಲದಂತಹ ಕಳಂಕ ತಂದೊಡ್ಡಿದ್ದು, ನಂತರದ ದಿನಗಳಲ್ಲಿ ನಮ್ಮ ನಾಯಕ ಕುಮಾರಣ್ಣನನ್ನು ಕಾಡಿ ಬೇಡಿ ಶಾಸಕತ್ವ ಪಡೆದುಕೊಳ್ಳಲು ಸಹಕಾರ ಪಡೆದಿದ್ದ. ಕಳೆದ 2018ರ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸುವ ಮೂಲಕ ಆತನಿಗೆ ಜನರು ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ಲೇವಡಿ ಮಾಡಿದರು.
    ಇದನ್ನೆಲ್ಲ ಮರೆತು ಈತನಿಗೂ ಮೊದಲು ಈ ಕ್ಷೇತ್ರದ ಶಾಸಕನಾಗಿ ಜನಸೇವೆ ಮಾಡಿರುವ ನನ್ನನ್ನೂ ಹಾಗೂ ನಮ್ಮ ಪಕ್ಷವನ್ನು ಪ್ರಸ್ತುತ ತನ್ನ ಚುನಾವಣಾ ಪ್ರಚಾರದಲ್ಲಿ ಲಘುವಾಗಿ ಮಾತನಾಡುತ್ತಿದ್ದು, ನಮ್ಮದು ರಾಷ್ಟ್ರೀಯ ಪಕ್ಷವೆಂದು ಅಬ್ಬರಿಸುತ್ತಿರುವ ಆತನಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಇಡೀ ದೇಶದಲ್ಲೇ ಆ ರಾಷ್ಟ್ರೀಯ ಪಕ್ಷದಿಂದ ಕೇವಲ 44 ಸಂಸದರನ್ನು ಪಡೆದುಕೊಂಡು ಹೀನಾಯ ಸ್ಥಿತಿ ತಲುಪಿರುವುದನ್ನು ನೆನೆಸಿಕೊಳ್ಳಲಿ ಎಂದು ಕಿಡಿಕಾರಿದರು.

  • ಅವರ ಪಕ್ಷದಂತೆ ನಾವು ಯಾವುದೇ ಗ್ಯಾರಂಟಿ ಕಾರ್ಡ್ ಕೊಡುವುದಿಲ್ಲ. ಬದಲಾಗಿ ಜನರಿಗೆ ಬದುಕು ಕಟ್ಟಿಕೊಡುವ ಭರವಸೆ ಈಡೇರಿಸುವ ಘೋಷಣೆಯೊಡನೆ ಮತ ಭಿಕ್ಷೆ ಬೇಡುತ್ತಿದ್ದೇವೆ. ಕುಮಾರಣ್ಣ ಸಿಎಂ ಆಗುವುದು ಖಚಿತವಾಗಿದ್ದು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದರ ಜತೆಗೆ ಈಗಾಗಲೇ ಘೋಷಣೆ ಮಾಡಿರುವ ಪಂಚರತ್ನ ಯೋಜನೆಗಳನ್ನು ಅನುಷ್ಠಾನಕ್ಕೆ ಚಾಲನೆ ನೀಡಲಾಗುವುದು. ರಾಜ್ಯದ ಜನಸಾಮಾನ್ಯರ ಹಿತಕ್ಕಾಗಿ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನನಗೆ ಆಶೀರ್ವದಿಸುವಂತೆ ಮನವಿ ಮಾಡಿದರು.
  • ಜಿಲ್ಲಾ ಯುವ ಘಟಕದ ಅಧ್ಯಕ್ಷ ರವಿ, ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್, ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಹೋಬಳಿ ಅಧ್ಯಕ್ಷ ಬುಲೆಟ್ ನಿಂಗಣ್ಣ, ಜಿಪಂ ಮಾಜಿ ಸದಸ್ಯ ಹನುಮಂತು, ದೊಡ್ಡಯ್ಯ, ಸಿದ್ದಾಚಾರಿ, ಚಂದಳ್ಳಿ ಶ್ರೀಧರ್ ಸೇರಿದಂತೆ ಐನೂರಕ್ಕೂ ಹೆಚ್ಚು ಕಾರ್ಯಕರ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net