ನರೆಗಾದಲ್ಲಿ ಸುಂದರ ಉದ್ಯಾನ ನಿರ್ಮಾಣ

Ghodampalli Garden-3
Published on

ಬೀದರ್: ತಾಲ್ಲೂಕಿನ ಘೋಡಂಪಳ್ಳಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ನರೆಗಾ)ಯಡಿ ಸುಂದರ ಉದ್ಯಾನ ನಿರ್ಮಾಣಗೊಂಡಿದೆ.
ನಾಗೋರಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿದೇವಿ ಹೊಸಮನಿ ಅವರ ಆಸಕ್ತಿಯ ಫಲವಾಗಿ ಶಾಲೆ ಹಸಿರು ಸಿರಿ ಹೊದ್ದುಕೊಂಡಿದೆ. ಪರಿಸರದೊಂದಿಗೆ ಮಕ್ಕಳ ಬಾಂಧವ್ಯ ಬೆಸೆದಿದೆ. ಸಾರ್ವಜನಿಕರ ಗಮನವನ್ನೂ ಸೆಳೆಯುತ್ತಿದೆ.
ಹುಲ್ಲು ಹಾಸು, ಅಲಂಕಾರಿಕ ಸಸಿಗಳು, ವಿಶ್ರಾಂತಿಗಾಗಿ ಅಲ್ಲಲ್ಲಿ ಹಾಕಲಾದ ಬೆಂಚ್‍ಗಳು ಶಾಲೆಯ ಅಂದ ಹೆಚ್ಚಿಸಿವೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ ಉದ್ಯಾನಕ್ಕೆ ಭೇಟಿ ಕೊಟ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಸದ್ಬಳಕೆ ಮಾಡಿಕೊಂಡು ಮಕ್ಕಳಲ್ಲಿ ಪರಿಸರ ಪ್ರೀತಿ ಬೆಳೆಸಲು ಶಾಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಉದ್ಯಾನ ನಿರ್ಮಿಸಲಾಗಿದೆ ಎಂದು ಗಾಯತ್ರಿದೇವಿ ಹೊಸಮನಿ ತಿಳಿಸಿದರು.
ಮಕ್ಕಳು ಲವಲವಿಕೆಯಿಂದ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗುವಂತಾಗಲು ಉದ್ಯಾನದಲ್ಲಿ ಹುಲ್ಲು ಹಾಸಲಾಗಿದೆ. ಸಸಿಗಳನ್ನು ಬೆಳೆಸಲಾಗಿದೆ. ಪ್ರಶಾಂತ ಪರಿಸರದಲ್ಲಿ ಅಧ್ಯಯನಕ್ಕೆ ಹಸಿರಿನ ಮಧ್ಯೆ,ಬೆಂಚ್‍ಗಳನ್ನು ಹಾಕಲಾಗಿದೆ. ಬೆಂಚ್‍ಗಳ ಮೇಲೆ ‘ಮನಸ್ಸಿದ್ದಲ್ಲಿ ಮಾರ್ಗ ಉಂಟು, ಇಲ್ಲದಿದ್ದಲ್ಲಿ ನೆಪಗಳು ನೂರೆಂಟು’ ಎನ್ನುವ ನಾಣ್ಣುಡಿ ಸೇರಿದಂತೆ ಹಲವಾರು ಪ್ರೇರಣಾತ್ಮಕ ವಾಕ್ಯಗಳನ್ನು ಬರೆಯಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ನರೇಗಾ ಯೋಜನೆ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಲಕ್ಷ್ಮಿ ಬಿರಾದಾರ, ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು, ಶಾಲೆಯ ಪ್ರಾಚಾರ್ಯ ಶರಣಪ್ಪ ಬಿರಾದಾರ, ಶಿಕ್ಷಕರು ಹಾಗೂ ಮಕ್ಕಳ ಸಹಕಾರದಿಂದ ಮಾದರಿ ಉದ್ಯಾನ ನಿರ್ಮಾಣ ಸಾಧ್ಯವಾಗಿದೆ. ಉದ್ಯಾನದ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿರುವ ಕಾರಣ ತಮ್ಮ ಶ್ರಮ ಸಾರ್ಥಕವಾಗಿದೆ ಎಂದು ತಿಳಿಸಿದರು.
ಖಾತರಿ ಯೋಜನೆಯಡಿ ವಿವಿಧ ಜನೋಪಯೋಗಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಇದೆ. ಗಾಯತ್ರಿದೇವಿ ಯೋಜನೆ ಬಳಸಿಕೊಂಡು ಶಾಲೆಗೆ ಹೊಸ ಕಳೆ ನೀಡಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಾಣಿಕರಾವ್ ಪಾಟೀಲ ಹೇಳಿದರು.
ಇಚ್ಛಾಶಕ್ತಿ ಇದ್ದರೆ ಮಾದರಿ ಕೆಲಸ ಮಾಡಬಹುದು ಎನ್ನುವುದಕ್ಕೆ ಪಿಡಿಒ ಗಾಯತ್ರಿದೇವಿ ಹೊಸಮನಿ ನಿದರ್ಶನವಾಗಿದ್ದಾರೆ. ಘೋಡಂಪಳ್ಳಿ ಉದ್ಯಾನ ಇತರ ಶಾಲೆಗಳಿಗೂ ಉದ್ಯಾನ ನಿರ್ಮಾಣಕ್ಕೆ ಪ್ರೇರಣೆ ನೀಡಲಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ವಿಜಯಕುಮಾರ, ಗ್ರಾಮದ ಮುಖಂಡ ತುಕಾರಾಮ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net