ನರಸೀಪುರದಲ್ಲಿ ಔಷಧ ಕೊಡಲು ವಿರೋಧ

21 sgr 5
Published on

ಸಾಗರ: ನರಸೀಪುರ ಗ್ರಾಮದಲ್ಲಿ ಪುನಃ ನಾಟಿ ಔಷಧ ಕೊಡಲು ತಾಲೂಕು ಆಡಳಿತ ಅನುಮತಿ ನೀಡಿದರೆ ಗ್ರಾಮಸ್ಥರು ದಯಾಮರಣ ಕೋರಿ ರಾಷ್ಟ್ರಪತಿಗೆ ಮನವಿ ಸಲ್ಲಿಸುವುದು ಅನಿವಾರ್ಯ ಎಂದು ತಾಪಂ ಸದಸ್ಯೆ ಜ್ಯೋತಿ ಕೋವಿ ಎಚ್ಚರಿಸಿದರು.

15 ವರ್ಷಗಳಿಂದ ತಾಲೂಕಿನ ನರಸೀಪುರದಲ್ಲಿ ಗ್ರಾಮಸ್ಥರು ಅನುಭವಿಸುತ್ತಿರುವ ಸಮಸ್ಯೆ ಅರಿಯಲು ಅಧಿಕಾರಿಗಳು ವಿಫಲರಾಗಿದ್ದು, ನಾರಾಯಣಮೂರ್ತಿ ಕುಟುಂಬದ ಪರವಾಗಿ ನಿಂತು ನಾಟಿ ಔಷಧ ಕೊಡಲು ಪರೋಕ್ಷವಾಗಿ ಸೂಚಿಸಿದ್ದಾರೆ. ಅನಿವಾರ್ಯ ಪರಿಸ್ಥಿತಿ ನಿರ್ವಣವಾದರೆ ಗ್ರಾಮದ 119 ಕುಟುಂಬಗಳು ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆಯಲು ತೀರ್ವನಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರೊನಾ ಹಿನ್ನೆಲೆಯಲ್ಲಿ ಗ್ರಾಮಸ್ಥರು ಫೆಬ್ರವರಿ ಅಂತ್ಯದಿಂದಲೇ ತಮ್ಮ ಗ್ರಾಮಕ್ಕೆ ಹೊರಗಿನ ಊರಿನವರು ಬರಬಾರದೆಂದು ಬಂದೋಬಸ್ತ್ ಕೈಗೊಂಡಿದ್ದಾರೆ. ಆದರೆ ನರಸೀಪುರದಲ್ಲಿ ನಾರಾಯಣಮೂರ್ತಿ ಅವರ ಕುಟುಂಬ ಪುನಃ ಔಷಧ ನೀಡಲು ಮುಂದಾಗಿರುವುದು, ತಾಲೂಕು ಆಡಳಿತ ಪರೋಕ್ಷವಾಗಿ ಅವರ ಬೆಂಬಲಕ್ಕೆ ನಿಂತಿರುವುದು ದುರಾದೃಷ್ಟಕರ ಸಂಗತಿ ಎಂದರು.

ಮಕ್ಕಳು ನೆಮ್ಮದಿಯಿಂದ ರಸ್ತೆಯ ಮೇಲೆ ತಿರುಗಲು ಸಾಧ್ಯವಾಗದ ಸ್ಥಿತಿ ಇದೆ. ಪರಿಸರ ನಾಶವಾಗುತ್ತಿದೆ. ಬ್ರೋಕರ್​ಗಳು ಗ್ರಾಮಸ್ಥರಿಗೆ ತೊಂದರೆ ಕೊಡುತ್ತಿದ್ದಾರೆ. ನಕಲಿ ಔಷಧ ಮಾರುತ್ತಿರುವವರಿಂದ ಗ್ರಾಮಸ್ಥರು ಭೀತಿ ಎದುರಿಸುತ್ತಿದ್ದಾರೆ. ಜಿಲ್ಲಾಡಳಿತ, ತಾಲೂಕು ಆಡಳಿತ ನಾರಾಯಣಮೂರ್ತಿ ಕುಟುಂಬದಿಂದ ಆಗುತ್ತಿರುವ ಸಮಸ್ಯೆಗೆ ಬಗೆಹರಿಸುತ್ತಿಲ್ಲ. ಎಸಿ ತಮಗೆ ಒತ್ತಡ ಬರುತ್ತಿದೆ ಎಂದು ಹೇಳುತ್ತಾರೆ. ಅಧಿಕಾರಿಗಳ ಸ್ಥಿತಿಯೇ ಹೀಗಾದರೆ ಗ್ರಾಮಸ್ಥರ ಸ್ಥಿತಿ ಹೇಗೆ? ಎಂದು ಪ್ರಶ್ನಿಸಿದರು. ಕೃಷ್ಣಮೂರ್ತಿ ಭಟ್, ಕೆರಿಯಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net