ನರಭಕ್ಷಕ ಚಿರತೆ ಸೆರೆಗೆ ಕೂಂಬಿಂಗ್

07Tmk_Chirate_Sere_02
Published on

ತುಮಕೂರು: ನರಭಕ್ಷಕ ಚಿರತೆಗೆ ಕಂಡಲ್ಲಿ ಗುಂಡಿಕ್ಕುವ ಸರ್ಕಾರದ ಆದೇಶ ಅಡ್ಡಗೋಡೆ ಮೇಲೆ ದೀಪವಿಟ್ಟಂತಿದ್ದು ಇದರ ನಡುವೆ ಅರಣ್ಯ ಇಲಾಖೆ ಶನಿವಾರ ಆನೆಗಳ ನೆರವಿನಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ.

ಮಾನವ ಭಕ್ಷಣೆಗೆ ಮುಂದಾಗಿರುವ 4 ಚಿರತೆಗಳನ್ನು ಕೊಲ್ಲಲು ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶುಕ್ರವಾರ ಅನುಮತಿ ನೀಡಿದ್ದಾರೆ. ಆದರೆ ನರಭಕ್ಷಕ ಚಿರತೆ ಯಾವುದು ಎಂಬುದನ್ನು ಗುರುತಿಸುವಂತೆ ಆದೇಶದಲ್ಲಿ ಸೂಚಿಸಿರುವುದು ಅರಣ್ಯ ಇಲಾಖೆ ಸಿಬ್ಬಂದಿಯನ್ನು ಪೇಚಿಗೆ ಸಿಲುಕಿಸಿದೆ.

ಆನೆಗಳ ಸಾಥ್!: ಸರ್ಕಾರದ ಆದೇಶ ಗೊಂದಲಕ್ಕೀಡಾಗಿರುವ ಹಿನ್ನೆಲೆಯಲ್ಲಿ 3 ತಾಲೂಕುಗಳ ಟ್ರೈಜಂಕ್ಷನ್ ಪ್ರದೇಶದಲ್ಲಿ ಶನಿವಾರ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದ್ದು ಚಿರತೆಗಳ ಶೋಧಕ್ಕೆ ನಾಗರಹೊಳೆ ಅಭಯಾರಣ್ಯದಿಂದ ಕರೆತಂದಿರುವ ಪಳಗಿದ ಆನೆಗಳು ಸಾಥ್ ನೀಡಿವೆ.  ತುಮಕೂರು, ಕುಣಿಗಲ್ ಹಾಗೂ ಗುಬ್ಬಿ ತಾಲೂಕುಗಳು ಹೊಂದಿ ಕೊಂಡಿರುವ ಟ್ರೈ ಜಂಕ್ಷನ್ ಪ್ರದೇಶ ವ್ಯಾಪ್ತಿಯ ಬನ್ನಿಕುಪ್ಪೆ, ಮಣಿಕುಪ್ಪೆ, ಬೈಚೇನಹಳ್ಳಿ, ಸಿಂಗೋನಹಳ್ಳಿ, ನೆಟ್ಟಿಕೆರೆ, ಕಾಮನಹಳ್ಳಿ ಸುತ್ತಮುತ್ತ ವಿಶೇಷ ಹುಲಿ ರಕ್ಷಣಾ ಪಡೆ (ಎಸ್‌ಟಿಪಿಎಫ್) ನೆರವಿನೊಂದಿಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಒಟ್ಟು 25ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಬೆವರು ಹರಿಸುತ್ತಿದ್ದಾರೆ.

ನರಭಕ್ಷಕ ಚಿರತೆ ಪತ್ತೆಗೆ ಡಿಎನ್‌ಎ ಪರೀಕ್ಷೆ !: ನರಭಕ್ಷಕ ಚಿರತೆಯನ್ನು ಕೊಲ್ಲುವಂತೆ ಜನರ ಆಕ್ರೋಶ, ಒತ್ತಾಯಕ್ಕೆ ಮಣಿದು ಅರಣ್ಯ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಆದರೆ, ಈ ಭಾಗದಲ್ಲಿ 6-7 ಚಿರತೆಗಳಿರುವುದರಿಂದ ಯಾವ ಚಿರತೆ ನರಭಕ್ಷಕ ಅನ್ನುವುದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಮನುಷ್ಯರನ್ನು ಕೊಂದಿರುವ 4 ಪ್ರಕರಣಗಳಲ್ಲಿ ಯಾರೊಬ್ಬರೂ ಪ್ರತ್ಯಕ್ಷದರ್ಶಿಗಳಿಲ್ಲ. ಹಾಗಾಗಿ, ಚಿರತೆಗಳು ಸೆರೆಯಾದ ನಂತರವೇ ದಾಳಿಯಿಂದ ಮೃತಪಟ್ಟವರ ಡಿಎನ್‌ಎ ಹಾಗೂ ಚಿರತೆ ಡಿಎನ್‌ಎ ಹೋಲಿಕೆ ಮಾಡಿದಾಗ ಮಾತ್ರ ನರಭಕ್ಷಕ ಚಿರತೆ ಯಾವುದು ಎಂಬುದನ್ನು ಪತ್ತೆಹಚ್ಚಬಹುದು. ಹಾಗಾಗಿ ಸದ್ಯ ಶೂಟೌಟ್ ಮಾಡುವ ನಿರ್ಧಾರದಿಂದ ಅರಣ್ಯ ಇಲಾಖೆ ಹಿಂದೆ ಸರಿದಿದೆ. ಆನೆ ಏರಿದ ಅರಿವಳಿಕೆ ತಜ್ಞ ಕಾರ್ಯಾಚರಣೆ ಸಾರಥ್ಯ ವಹಿಸಿರುವ ಅರಿವಳಿಕೆ ತಜ್ಞ ಡಾ.ಮುರಳಿ ಮಾವುತರ ಜತೆ ಆನೆ ಏರಿ ಉರಿಬಿಸಿಲು ಲೆಕ್ಕಿಸದೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡರು. ಅರಿವಳಿಕೆ ನೀಡಬಲ್ಲ ಗುರಿಕಾರರಾದ ವೆಂಕಟೇಶ್ ಹಾಗೂ ಅಕ್ರಂ ಮತ್ತೊಂದು ಆನೆ ಏರಿ ಇಡೀ ದಿನ ಚಿರತೆ ಕಾರ್ಯಾಚರಣೆಯಲ್ಲಿ ಭಾಗಿಯಾದರು.

ವಾಸನೆಯ ಮೂಲಕ ಪ್ರಾಣಿಗಳ ಇರುವಿಕೆಯನ್ನು ಆನೆಗಳು ಕಂಡು ಹಿಡಿಯಲಿದ್ದು ಅದರಲ್ಲೂ ಚಿರತೆ ಇರುವಿಕೆ ಸುಲಭವಾಗಿ ಆನೆಗಳ ಅರಿವಿಗೆ ಬರಲಿದೆ. ಚಿರತೆಯ ಸುಳಿವನ್ನು ಕೆಲ ಆಂಗಿಕ ಸನ್ನೆ ಮೂಲಕ ಆನೆ ವ್ಯಕ್ತಪಡಿಸುತ್ತದೆ. ಇದು ಮಾವುತ ಹಾಗೂ ಎಸ್‌ಟಿಪಿಎಫ್ ಸಿಬ್ಬಂದಿಗೆ ಗೊತ್ತಾಗಲಿದ್ದು ಚಿರತೆ ಕಂಡುಬಂದಲ್ಲಿ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯುವ ಪ್ರಯತ್ನ ಮಾಡಲಾಗುವುದು. ಡಾ.ಮುರಳಿ ಅರಿವಳಿಕೆ ತಜ್ಞ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net