

ಚನ್ನರಾಯಪಟ್ಟಣ: ತಾಲೂಕಿನ ಮಾದಲಗೆರೆ, ಬಾಗೂರು, ದಿಡಗ ಹಾಗೂ ವಿವಿಧ ಕೆರೆಗಳು ತುಂಬಿ ಕೋಡಿಯಲ್ಲಿ ನೀರು ಹರಿಯುತ್ತಿದ್ದು ಮಕ್ಕಳು ನೀರಿನಲ್ಲಿ ಇಳಿದು ಮೋಜು ಮಸ್ತಿ ಮಾಡಿದರು.
ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕಳೆದ ಎರಡು ದಿನಗಳಿಂದ ಶಾಲಾ-ಕಾಲೇಜುಗಳಿಗೆ ರಜೆ ಇದ್ದರಿಂದ ಬೆಂಗಳೂರು, ಮೈಸೂರು ಹಾಗೂ ವಿವಿದಿಡೆಯಿಂದ ಹಳ್ಳಿಗಳಿಗೆ ಆಗಮಿಸಿದ್ದ ಮಕ್ಕಳು ನೀರಿನಲ್ಲಿ ಹಾಡಿ ಕುಣಿದು ಕುಪ್ಪಳಿಸಿದರು.
ಪಾಲಕರು ಸಹ ಸೇರಿಕೊಂಡು ಮಿನಿ ಫಾಲ್ಸ್ ನಂತೆ ಹರಿಯುತ್ತಿರುವ ಕೋಡಿಗಳಲ್ಲಿ ಮಕ್ಕಳೊಂದಿಗೆ ನೀರಿನಲ್ಲಿ ಹಾಡುತ್ತಾ ಗಂಟೆಗಟ್ಟಲೆ ಸಮಯ ಕಳೆದರು.
ಆದರೆ, ಕಳೆದ 20 ವರ್ಷಗಳಿಂದ ವಾಡಿಕೆಯಂತೆ ಮಳೆಯಾಗದ ಪರಿಣಾಮ ಕೆರೆ-ಕಟ್ಟೆಗಳು ನೀರಿಲ್ಲದೆ ಬಣಗುಡುತ್ತಿದ್ದವು.
ಕೃಷಿ ಜಮೀನುಗಳಿಗೆ ಹಾಗೂ ರಸ್ತೆ ನಿರ್ಮಾಣದ ಸಲುವಾಗಿ ಟ್ರ್ಯಾಕ್ಟರ್ ಹಾಗೂ ಜೆಸಿಬಿ ಯಂತ್ರಗಳ ಮೂಲಕ ಕೆರೆಯಂಗಳದಲ್ಲಿ ಎಲ್ಲಂದರಲ್ಲಿ ಮಣ್ಣಿಗಾಗಿ ಅತಿ ಹೆಚ್ಚು ಆಳ ಗುಂಡಿ ತೆಗೆಯಲಾಗಿದೆ.
ಸದ್ಯ ನೀರು ತುಂಬಿರುವುದರಿಂದ ಅಪಾಯ ಹಾಗೂ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಪಾಲಕರು ಎಚ್ಚರಿಕೆ ವಹಿಸಬೇಕು ಎಂಬುದು ಸ್ಥಳೀಯರ ಮನವಿಯಾಗಿದೆ.