ನರಗುಂದದಲ್ಲಿ ಸರಣಿ ಕಳ್ಳತನ

18 NRD-1
Published on

ನರಗುಂದ: ಪಟ್ಟಣದಲ್ಲಿ ಶುಕ್ರವಾರ ಬೆಳಗಿನ ಜಾವ ಮೂರು ಮನೆಗಳಲ್ಲಿ ಸರಣಿ ಕಳ್ಳತನ ಪ್ರಕರಣ ನಡೆದಿದ್ದು, ಲಕ್ಷಾಂತರ ರೂ. ಮೌಲ್ಯದ ಬಂಗಾರ, ಬೆಳ್ಳಿ ಹಾಗೂ ನಗದು ಹಣ ದೋಚಲಾಗಿದೆ.

ಪಟ್ಟಣದ ಅರ್ಭಾಣ ದೇಸಾಯಿ ಬಾವಿ ಬಡಾವಣೆಯ ಬಡಿಗೇರ ಕುಟುಂಬದವರು ಒಂದು ವಾರದ ಹಿಂದೆ ಮನೆಗೆ ಬೀಗ ಹಾಕಿ ಸಂಬಂಧಿಕರ ಊರಿಗೆ ತೆರಳಿದ್ದಳು. ಇದನ್ನು ಗಮನಿಸಿದ್ದ ದುಷ್ಕರ್ವಿುಗಳು ಶುಕ್ರವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಮನೆ ಬೀಗ ಮುರಿದು ಟ್ರಂಕ್​ನಲ್ಲಿದ್ದ ಬಂಗಾರ, ಬೆಳ್ಳಿಯ ಆಭರಣ ಲೂಟಿ ಮಾಡಿದ್ದಾರೆ. ನಂತರ ಹಗೇದಕಟ್ಟಿ ಬಡಾವಣೆಯ ಹನುಮಂತ ಗಾರವಾಡ ಎಂಬುವರ ಮನೆ ಬೀಗ ಮುರಿದು ಮನೆಯಲ್ಲಿಟ್ಟಿದ್ದ ಎರಡು ಕಬ್ಬಿಣದ ಟ್ರಂಕ್​ಗಳನ್ನು ಹೊತ್ತೊಯ್ದಿದ್ದಾರೆ. ಕಣಕೀಕೊಪ್ಪ ರಸ್ತೆಯ ರೋಟರ್ಯಾಕ್ಟ್ ಶಾಲೆ ಹತ್ತಿರ ಈ ಎರಡು ಟ್ರಂಕ್​ನಲ್ಲಿದ್ದ 30 ಸಾವಿರ ರೂ. ನಗದು, ಅರ್ಧ ತೊಲೆ ಚಿನ್ನದ ಸರ, 3 ತೊಲೆಯ ಬೆಳ್ಳಿಯ ಚೈನ್​ಗಳನ್ನು ಕದ್ದಿದ್ದಾರೆ. ಬೆಳಗಿನ ಜಾವ 2.30ರ ಸುಮಾರಿಗೆ ಲೋಧಿಗಲ್ಲಿ ಬಡಾವಣೆಯ ಮಲ್ಲಿಕಾರ್ಜುನ ಗೌಡರ ಎಂಬುವರ ಮನೆ ಬೀಗ ಮುರಿದು ಕಳ್ಳತನಕ್ಕೆ ಮುಂದಾಗಿದ್ದರು. ಆದರೆ, ಪಕ್ಕದಲ್ಲಿರುವ ಸಹೋದರನ ಮನೆಯಲ್ಲೇ ಮಲಗಿದ್ದ ಮಲ್ಲಿಕಾರ್ಜುನಗೆ ಎಚ್ಚರವಾಗಿ ಸ್ಥಳಕ್ಕೆ ಬರುತ್ತಿದ್ದಂತೆ ಮೂವರು ದುಷ್ಕರ್ವಿುಗಳು ಕೈಯಲ್ಲಿದ್ದ ಕಬ್ಬಿಣದ ರಾಡು, ತಂತಿ, ವಿವಿಧ ಅಸ್ತ್ರಗಳನ್ನು ತೋರಿಸಿ 20 ಸಾವಿರ ರೂ.ನಗದು ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಕೆಲ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net