ನರಗುಂದದಲ್ಲಿ ಮತ್ತೆ ಭೂಕುಸಿತ

27 NRD-2
Published on

ನರಗುಂದ: ಪಟ್ಟಣದಲ್ಲಿ ಭೂಕುಸಿತ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಭಾನುವಾರ ಉಂಟಾದ ಭೂಕುಸಿತದ ಗುಂಡಿಯಲ್ಲಿ ಟ್ರ್ಯಾಕ್ಟರ್​ವೊಂದು ಸಿಲುಕಿ ಸಾಕಷ್ಟು ಅವಾಂತರ ಸೃಷ್ಟಿಸಿದೆ.

ಪಟ್ಟಣದ ಕಸಬಾ ಬಡಾವಣೆಯ ಮಹಾದೇವಪ್ಪ ಮುತವಾಡ ಅವರ ಮನೆ ಹಿತ್ತಲಿನಲ್ಲಿ ಬೆಳಗ್ಗೆ ಏಕಾಏಕಿ ಭೂಕುಸಿತದಿಂದ ಗುಂಡಿ ಬಿದ್ದಿತ್ತು. ಈ ಗುಂಡಿ ಮುಚ್ಚುವಂತೆ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳಿಗೆ ಹೇಳಿದ್ದರು. ಆಗ ಅವರು ‘ಪುರಸಭೆ ಟ್ರ್ಯಾಕ್ಟರ್ ಬೇರೆ ಕೆಲಸಕ್ಕೆ ತೆರಳಿದೆ. ಬೇಕಿದ್ರೆ ನಿಮ್ಮ ಟ್ರ್ಯಾಕ್ಟರ್ ಕಳುಹಿಸಿಕೊಡಿ. ಗುಂಡಿ ಮುಚ್ಚಿಸಲು ಮಣ್ಣನ್ನು ತುಂಬಿ ಕಳುಹಿಸಿಕೊಡುತ್ತೇವೆ’ ಎಂದು ತಿಳಿಸಿದ್ದಾರೆ. ಅದರಂತೆ ಗುಂಡಿ ಮುಚ್ಚಲು ಸ್ಥಳಕ್ಕಾಗಮಿಸಿದ್ದ ಟ್ರ್ಯಾಕ್ಟರ್ ಗಾಲಿ ಕೆಳಗಡೆಯೇ ಮತ್ತೊಂದು ಗುಂಡಿ ಬಿದ್ದಿದ್ದು, ಸಾಕಷ್ಟು ಅವಾಂತರಕ್ಕೆ ಕಾರಣವಾಯಿತು. ಗುಂಡಿಯಲ್ಲಿ ಸಿಲುಕಿದ ಟ್ರ್ಯಾಕ್ಟರ್ ಮೇಲೆತ್ತಲು ಅಲ್ಲಿನ ಜನರು ಜೀವಭಯದಿಂದ ಹಿಂದೇಟು ಹಾಕಿದ್ದು ಕಂಡುಬಂತು. ತದನಂತರ ಪುರಸಭೆ ಅಧಿಕಾರಿ ಅಣ್ಣಪ್ಪ ದೊಡಮನಿ ಅವರು ಕೆಲವರ ಸಹಾಯದಿಂದ ಟ್ರ್ಯಾಕ್ಟರ್ ಹಿಂಬದಿ ಟ್ರೇಲರ್​ನಲ್ಲಿದ್ದ ಮಣ್ಣು ತೆರವುಗೊಳಿಸಿ, ಮತ್ತೊಂದು ಟ್ರ್ಯಾಕ್ಟರ್ ಸಹಾಯದಿಂದ ಗುಂಡಿಯಲ್ಲಿ ಸಿಲುಕಿದ್ದ ಟ್ರ್ಯಾಕ್ಟರ್ ಹೊರತೆಗೆದರು. ಬಳಿಕ ಎರಡು ಗುಂಡಿಗಳನ್ನು ಮುಚ್ಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net