

ಕಲಬುರಗಿ: ಪ್ರಯಾಣಕ್ಕಾಗಿ ನೀವು ನರಕಯಾತನೆ ಅನುಭವಿಸಬೇಕೆ? ಹಾಗಾದರೆ ಮಹಾನಗರದ ಕೆಲ ರಸ್ತೆಗಳಲ್ಲಿ ಒಂದೆರಡು ದಿನ ಸಂಚರಿಸಿದರೆ ಸಾಕು, ನರಕಲೋಕದ ಪ್ರತ್ಯಕ್ಷ ದರ್ಶನವಾಗುತ್ತದೆ. ಇಷ್ಟಾದರೂ ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇನ್ನು ಹಿಂದೆ ವರ್ಗಾವಣೆಯಾಗಿದ್ದ ಅಧಿಕಾರಿಯೇ ಮತ್ತೆ ಪಾಲಿಕೆಗೆ ಬಂದಿದ್ದು, ಯಾರ ಮಾತು ಕೇಳುವುದಿಲ್ಲವೆಂಬ ಆರೋಪ ಬೇರೆ ಇದೆ.
ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಸುರಿದ ಮಳೆಯಿಂದಾಗಿ ಬಹುತೇಕ ರಸ್ತೆಗಳು ಹಾಳಾಗಿವೆ. ಕೆಲ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ತಗ್ಗು ಎಲ್ಲಿದೆ ಎಂಬುದು ತಿಳಿಯದೆ ಸವಾರರು ವಾಹನಗಳಿಂದ ಬಿದ್ದಿದ್ದುಂಟು. ಕೇವಲ 10 ನಿಮಿಷದಲ್ಲಿ ಮುಗಿಯಬೇಕಿದ್ದ ಕೆಲಸದ ಬಗ್ಗೆ ಗಮನಕ್ಕೆ ತಂದರೂ ಹತ್ತು ದಿನಗಳಾದರೂ ಆಯುಕ್ತರು ಕಣ್ತೆರೆದು ನೋಡಿಲ್ಲ. ಇಂಥವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎನ್ನುತ್ತಾರೆ ಜನತೆ.
ಹಳೆಯ ಜೇವರ್ಗಿ ರಸ್ತೆ ರೈಲ್ವೆ ಕೆಳಸೇತುವೆಯಲ್ಲಿ ಚಿಕ್ಕದಾದ ತಗ್ಗು ಬಿದ್ದಿದ್ದು, ದಿನದ 24 ತಾಸು ಕೊಳಚೆ ನೀರು ಹರಿಯುತ್ತಿದೆ. ಈ ನೀರು ಬರುವುದನ್ನು ನಿಲ್ಲಿಸಿ ಒಂದಿಷ್ಟು ಸಿಮೆಂಟ್ ಹಾಕಿ ತಗ್ಗು ರಸ್ತೆ ಮುಚ್ಚಿ ಎಂದು ಎರಡು ಬಾರಿ ಆಯುಕ್ತರಿಗೆ ಮನವಿ ಮಾಡಿದ್ದರೂ ಇದುವರೆಗೆ ಗಮನಹರಿಸಿಲ್ಲ. ಇಲ್ಲವೇ ಪಾಲಿಕೆ ಸಿಬ್ಬಂದಿ ಅವರ ಮಾತು ಕೇಳದಷ್ಟು ಮೀರಿದವರಿರಬೇಕು.
ಹಳೆಯ ಜೇವರ್ಗಿ ರಸ್ತೆಯಿಂದ ಜೇವರ್ಗಿ ಕಾಲನಿವರೆಗೆ ವಂತೂ ಸಂಪೂರ್ಣ ಹದಗೆಟ್ಟಿದೆ. ಗಮನಾರ್ಹವೆಂದರೆ, ಇದೇ ರಸ್ತೆ ಬಳಿ ಸಂಸದರ ಮನೆ ಇದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಅರಣ್ಯ ಇಲಾಖೆಗೆ ಹೋಗುವ ರಸ್ತೆಯೂ ಹಾಳಾಗಿದೆ. ಇಲ್ಲಿ ಆಗ್ಗಾಗ್ಗೆ ಕೊಳಚೆ ನೀರು ಬೀಡಲಾಗುತ್ತದೆ. ಇದೇ ವೃತ್ತದಲ್ಲಿ ಪಾಲಿಕೆ ಸಿಬ್ಬಂದಿ ಬೆಳಗ್ಗೆ ಇರುತ್ತಾರೆ. ಆದರೆ ಯಾರ ಕಣ್ಣಿಗೂ ಬೀಳದಿರುವುದು ವಿಚಿತ್ರ.
ಹುಮನಾಬಾದ್ ರಸ್ತೆಯಿಂದ ಆಳಂದ ನಾಕಾ ಮೂಲಕ ರಾಮ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆ ಕಥೆಯೂ ಇದೇ ಆಗಿದೆ. ಜಿಲ್ಲಾ ನ್ಯಾಯಾಲಯದಿಂದ ಲಾಲಗೇರಿ ಕ್ರಾಸ್ವರೆಗಿನ ರಸ್ತೆ ಮಧ್ಯೆ ತಗ್ಗು ದಿನ್ನೆಗಳು ಬಿದ್ದಿವೆ. ಸೂಪರ್ ಮಾರ್ಕೆಟ್, ನೆಹರು ಗಂಜ್, ಜಗತ್ ವೃತ್ತದಿಂದ ದರ್ಗಾ , ಲಾಲಗೇರಿ ಕ್ರಾಸ್ನಿಂದ ಮಾರ್ಕೆಟ್, ಸಂತೋಷ ಕಾಲನಿಯಿಂದ ಉದನೂರ ರಸ್ತೆಗಳು ಎಷ್ಟರ ಮಟ್ಟಿಗೆ ಹಾಳಾಗಿವೆ ಎಂಬ ಕಥೆ ಹೇಳುವಂತಿವೆ.
ಹಿಂದೆ ರಾಹುಲ್ ಪಾಂಡ್ವೆ ಆಯುಕ್ತರಿದ್ದಾಗ ನಗರ ಪ್ರದಕ್ಷಿಣೆ ಹಾಕಿ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಆದರೆ ಈ ಆಯುಕ್ತರು ನಗರ ಹೊರತುಪಡಿಸಿ ಜಿಲ್ಲೆಯ ಸಮಸ್ಯೆಗಳನ್ನು ಅರಿಯಲು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಈ ಮೊದಲು ಪಾಲಿಕೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದ ಆರ್.ಪಿ. ಜಾಧವ್ ಅವರನ್ನು ಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ವರ್ಗಾವಣೆ ಮಾಡಿದ್ದರು. ಆಗ ಇದನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲಾಯಿತೆ ಹೊರತು, ಈ ಅಧಿಕಾರಿ ಜನರಿಗೆ ಸ್ಪಂದಿಸುವ ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದನ್ನು ಯಾರೂ ನೋಡಲಿಲ್ಲ. ಈಗ ಇದೇ ಅಧಿಕಾರಿ ಮತ್ತೆ ಬಂದಿದ್ದಾರೆ. ಇಂಥವರಿಂದ ಏನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಲಾಗುತ್ತಿದೆ.