

ಚಾಮರಾಜನಗರ: ಹನೂರು ತಾಲೂಕಿನ ಅರಬಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ನ್ಯಾಯಬೆಲೆ ಅಂಗಡಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಎನ್.ಅಪ್ಪಾಜಿ ಸುಳ್ಳು ಆರೋಪ ಮಾಡುತ್ತಿದ್ದು, ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಇಲ್ಲದಿದ್ದರೆ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಅರಣ್ಯ ಸಮಿತಿ ಅಧ್ಯಕ್ಷ ಎನ್.ಕೃಷ್ಣಮೂರ್ತಿ ಎಚ್ಚರಿಕೆ ನೀಡಿದರು.
ನ್ಯಾಯಬೆಲೆ ಅಂಗಡಿ ವ್ಯಾಪ್ತಿಯಲ್ಲಿ 6 ಗ್ರಾಮಗಳಿದ್ದು, 500 ಕಾರ್ಡ್‌ದಾರರು ಇದ್ದಾರೆ. ಇದುವರೆಗೂ ನಮ್ಮ ತಂದೆಯ ನ್ಯಾಯಬೆಲೆ ಅಂಗಡಿಯ ಲೋಪದೊಷಗಳ ಬಗ್ಗೆ ಪಡಿತರದಾರರು ಯಾವುದೇ ದೂರನ್ನು ನೀಡಿಲ್ಲ. ಆದರೆ ಅಪ್ಪಾಜಿ ಗ್ರಾ.ಪಂ. ಚುನಾವಣೆಯಲ್ಲಿ ಮೂರು ಬಾರಿ ಸೋತು ನಿರಾಸೆಯಾಗಿ ನೊಂದು ನಮ್ಮ ತಂದೆಯ ನ್ಯಾಯಬೆಲೆ ಅಂಗಡಿ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಪ್ಪಾಜಿ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿಲ್ಲ. ಕೆಲಸ ಮಾಡಿಸಿಕೊಡುತ್ತೇನೆಂದು ಅಪ್ಪಾಜಿ ಜನರ ಬಳಿ ಹಣ ಪಡೆದು ಮೋಸ ಮಾಡುವುದರ ಜತೆಗೆ ಅಧಿಕಾರಿಗಳನ್ನು ಎದುರಿಸುವ ಜತೆಗೆ ಗ್ರಾಮದ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು. ಮುಖಂಡರಾದ ಜಡೆಯಪ್ಪ, ನಿಂಗಯ್ಯ, ನಂಜಪ್ಪ, ಕೃಷ್ಣಶೆಟ್ಟಿ, ಮಾದೇಶ್ ಸುದ್ದಿಗೋಷ್ಠಿಯಲ್ಲಿದ್ದರು.