ನಮ್ಮೊಳಗೆ ದೇವರಿದ್ದಾನೆ

2906Klb14
Published on

ಕಲಬುರಗಿ: ಪ್ರತಿಯೊಬ್ಬ ಮನುಷ್ಯರಲ್ಲೂ ದೇವರಿದ್ದಾನೆ ಎಂದು ಡಾ. ಗಂಗಾಬಿಕಾ ಪಾಟೀಲ್ ಅಭಿಮತ ವ್ಯಕ್ತಪಡಿಸಿದರು.
ನಗರದ ಅನುಭವ ಮಂಟಪದಲ್ಲಿ ಕಲಬುರಗಿ ಬಸವ ಸಮಿತಿ ಆಯೋಜಿಸಿದ್ದ 633ನೇ ಆನ್ಲೈನ್ ದತ್ತಿ ಕಾರ್ಯಕ್ರಮದಲ್ಲಿ ಬಸವ ತತ್ವಜ್ಞಾನದಲ್ಲಿ ಇಷ್ಟಲಿಂಗ ಪರಿಕಲ್ಪನೆ ಕುರಿತು ಮಾತನಾಡಿದರು.
ಮನುಷ್ಯನ ಶರೀರ ಎಂಟು ತತ್ತ್ವಗಳಿಂದ ಕೂಡಿದೆ. ಪರಮಾತ್ಮ ಅಂತರಂಗದಲ್ಲಿ ಅರಿವಿನ ರೂಪದಲ್ಲಿದ್ದಾನೆ. ಆ ಅರಿವಿನ ಕಳೆಯನ್ನು ಮನುಷ್ಯ ಕಂಡುಕೊಳ್ಳಬೇಕು. ಕಸ್ತೂರಿಮೃಗದ ಹೊಕ್ಕಳಲ್ಲಿ ಸುಗಂಧ ಇರುವಂತೆ ಮನುಷ್ಯನಲ್ಲಿಯೇ ದೇವರಿದ್ದಾನೆ. ಅದುವೇ ಇಷ್ಟಲಿಂಗ ತತ್ತ್ವವಾಗಿದೆ ಎಂದರು.
ಪರಮಾತ್ಮ ಬ್ರಹ್ಮಾಂಡವನ್ನು ವ್ಯಾಪಿಸಿದ್ದಾನೆ. ಮನಸ್ಸು ಕೂಡ ಅಷ್ಟೇ ಚಂಚಲವಾಗಿದೆ. ಇದನ್ನು ಇಷ್ಟಲಿಂಗ ಪೂಜೆಯ ಮೂಲಕ ನಿಗ್ರಹಿಸಬೇಕು. ಮನುಷ್ಯ ಲಿಂಗವನ್ನು ನೋಡುತ್ತ ನೋಡುತ್ತ ಲಿಂಗವೇ ತಾನಾಗುತ್ತಾನೆ. ಅಂಧಾನುಕರಣೆಗಳನ್ನು ಬಿಟ್ಟು ವೈಚಾರಿಕವಾದ ವೈಜ್ಞಾನಿಕವಾದ ಇಷ್ಟಲಿಂಗ ತತ್ತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಡಾ. ಜಯಶ್ರೀ ದಂಡೆ ಅಧ್ಯಕ್ಷತೆ ವಹಿಸಿದ್ದರು. ಬಸವ ಸಮಿತಿ ಅಧ್ಯಕ್ಷೆ ಡಾ.ವಿಲಾಸವತಿ ಖೂಬಾ, ಪ್ರಧಾನ ಕಾರ್ಯದರ್ಶಿ ಎಚ್.ಕೆ. ಉದ್ದಂಡಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net