

ಕಾರವಾರ: ಅಂಕೋಲಾ ಹಾಗೂ ಕುಮಟಾ ತಾಲೂಕುಗಳ ನಡುವೆ ಇರುವ ಎಂಟು ಕುಗ್ರಾಮಗಳ ಜನ ಜಿಲ್ಲೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ನಮ್ಮೂರಿಗೆ ಬಂದು ನಮ್ಮ ಸಮಸ್ಯೆ ಅರಿಯಿರಿ.
ಶ್ರೀ ರಾಮ ವನವಾಸಿ ಗ್ರಾಮ ಸಂಕುಲ ಸಮಿತಿಯ 20 ರಷ್ಟು ಸದಸ್ಯರು ತಮ್ಮೂರಿನಿಂದ ಬೈಕ್ ರ‍್ಯಾಲಿ ಮೂಲಕ ಕಾರವಾರಕ್ಕೆ ಬಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಅವರನ್ನು ಭೇಟಿಯಾಗಿ ಈ ಆಹ್ವಾನ ನೀಡಿದರು. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರ ಕಚೇರಿಗೂ ತಮ್ಮ ಮನವಿ ಸಲ್ಲಿಸಿದರು.
ಗ್ರಾಮಸ್ಥರ ಮನವಿ ಏನು?: ಗುಡಿ ನೇವಳಸೆ, ಬೇಣದಳ್ಳಿ, ಶೇಡಿಗದ್ದೆ, ಬ್ರಹ್ಮೂರು, ಕಬಗಾರ, ವಾಡಗಾರ, ಶೇಡೂರು ಅಗ್ರಹಾರ ಸೇರಿ 8 ಗ್ರಾಮಗಳು ಮೂಲ ಸೌಕರ್ಯ ವಂಚಿತವಾಗಿವೆ. ಇಲ್ಲಿಗೆ ರಸ್ತೆಯಿಲ್ಲ. ಏಳರಿಂದ ಎಂಟು ಕಿಮೀ ನಡೆದು ಆಸ್ಪತ್ರೆಗೆ ಬರಬೇಕು. ಪಡಿತರ ತರಲೂ ಕಷ್ಟ ಪಡಬೇಕು. ಶಾಲೆಗೆ ಹೋಗುವ ಮಕ್ಕಳಿಗೂ ಸಂಕಷ್ಟವಾಗಿದೆ. ಮಳೆಗಾಲದಲ್ಲಿ ಗ್ರಾಮಗಳಿಗೆ ವಾಹನ ಹೋಗದೇ ಅವರು ದ್ವೀಪಗಳಾಗುತ್ತವೆ.
ಕಳೆದ ಕೆಲ ವರ್ಷಗಳಿಂದ ಇಂಥ ಸಮಸ್ಯೆಗಳ ಬಗ್ಗೆ ಶ್ರೀ ರಾಮ ವನವಾಸಿ ಗ್ರಾಮ ಸಂಕುಲ ಸಮಿತಿ ಧ್ವನಿ ಎತ್ತುತ್ತಿದೆ. ಈ ಬಾರಿ ಫೆ. 9 ರಂದು ಮಧ್ಯಾಹ್ನ 1.30 ಕ್ಕೆ ಗುಡಿ ನೇವಳಸೆಯಲ್ಲಿ ‘ಸಂಕುಲ ಗ್ರಾಮೋತ್ಸವ’ ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಅದಕ್ಕೆ ಆಗಮಿಸಿ ನಮ್ಮ ಸಮಸ್ಯೆ ಅರಿಯಬೇಕು. ಮೂಲ ಸೌಕರ್ಯ ಕಲ್ಪಿಸುವ ವ್ಯವಸ್ಥೆಯಾಗಬೇಕು ಎಂದು ಮನವಿ ಮಾಡಿದರು.
ವನವಾಸಿ ಕಲ್ಯಾಣ ಸಮಿತಿಯ ಅನಸೂಯಾ ಅವರ ನೇತೃತ್ವದಲ್ಲಿ ಮುಕುಂದ ಮರಾಠಿ, ಕೇದಾರ ಮರಾಠಿ, ನಾಗೇಂದ್ರ ಮರಾಠಿ ಇತರರು ಇದ್ದರು.